ಶಿವಮೊಗ್ಗ: ಸಾಗರ (Sagar) ತಾಲೂಕಿನ ಶರಾವತಿ ವನ್ಯಜೀವಿ ವಲಯದಲ್ಲಿ (Sharavati Wildlife Sanctuary) ವಿದ್ಯುತ್ ತಂತಿ ಹಾಯಿಸಿ ಎರಡು ಜಿಂಕೆ ಬೇಟೆಯಾಡಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಬಂಧಿಸಿದ್ದಾರೆ.
ನಾಗವಳ್ಳಿ ಗ್ರಾಮದ ನಿವಾಸಿಗಳಾದ ಬಾನು, ಶಿವು ಹಾಗೂ ಮಹೇಶ್ ಬಂಧಿತ ಆರೋಪಿಗಳು. ಈ ಮೂವರು ಪ್ರಕರಣದ ಎ-2, ಎ-5 ಹಾಗೂ ಎ-6 ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ:ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಬೇಟೆಗಾರರ ಕ್ರೌರ್ಯ – ಕಡವೆಯನ್ನು ಮೂರು ತುಂಡು ಮಾಡಿ ಪರಾರಿ
ಎ-1 ಷಾಜಿ, ಎ-3 ರಾಮ ಹಾಗೂ ಎ-4 ಶ್ರೀಧರ್ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಜಿಂಕೆ ಬೇಟೆಯಾಡಿ, ಮಾಂಸ ಮಾಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಗಾರಿನ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಷಾಜಿ ಜಮೀನಿನಲ್ಲಿ ವಿದ್ಯುತ್ ಹರಿಸಿದ್ದರು. ವಿದ್ಯುತ್ ತಗುಲಿ ಎರಡು ಗಂಡು ಜಿಂಕೆಗಳು ಸಾವನ್ನಪ್ಪಿದ್ದವು. ಇವುಗಳನ್ನು ಆರೋಪಿಗಳು ಸಾಂಬರು ಕೂಡ ಮಾಡಿದ್ದರು. ಜಿಂಕೆಗಳ ಚರ್ಮ, ಮೂಳೆಯನ್ನು ಮಣ್ಣಿನಡಿ ಹೂತು ಹಾಕಿದ್ದರು.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿ ಪ್ರಕರಣ ದಾಖಲಾಗಿದೆ. ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹನೂರು ಶೂಟೌಟ್ ಬೆನ್ನಲ್ಲೇ ಜಿಲೆಟಿನ್ ಸ್ಫೋಟಿಸಿ ಕಾವೇರಿ ವನ್ಯಧಾಮದಲ್ಲಿ ಕಳ್ಳಬೇಟೆ ತಡೆ ಶಿಬಿರ ಧ್ವಂಸ
