ನವದೆಹಲಿ: ಭಾರತ–ಪಾಕಿಸ್ತಾನ ಗಡಿಯಲ್ಲಿ (India-Pakistan) ಮತ್ತೆ ಸೇನಾ ಚಟುವಟಿಕೆಗಳ ಬಗ್ಗೆ ಕುತೂಹಲ ಮತ್ತು ಆತಂಕ ಹೆಚ್ಚಾಗಿದೆ. ಭಾರತೀಯ ವಾಯುಪಡೆ ಸೆ.21ರಿಂದ ಅ.7ರವರೆಗೆ 17 ದಿನಗಳ ಕಾಲ ಪಶ್ಚಿಮ ರಾಜಸ್ಥಾನದ ವಿಶಾಲ ವಾಯುಪ್ರದೇಶವನ್ನು ಸೇನಾ ಚಟುವಟಿಕೆಗಾಗಿ ಕಾಯ್ದಿರಿಸಿ NOTAM (Notice to Air Missions) ಹೊರಡಿಸಿದೆ. ಈ ಬೆಳವಣಿಗೆ ಪಾಕಿಸ್ತಾನದ ರಕ್ಷಣಾ ವಲಯದಲ್ಲಿ ಎಚ್ಚರಿಕೆ ಮೂಡಿಸಿದ್ದು, ಅಲ್ಲಿನ ರಕ್ಷಣಾ ಸಚಿವಾಲಯ ತುರ್ತು ಸಭೆ ನಡೆಸಿದೆ.
ರಾಜಸ್ಥಾನದ ಗಡಿ ಪ್ರದೇಶದಲ್ಲಿ ಭಾರಿ ಅಭ್ಯಾಸ
NOTAM ಅಡಿಯಲ್ಲಿ ಜೈಸಲ್ಮೇರ್– ಬಾರ್ಮರ್– ಫಲೋಡಿ – ಜೋಧಪುರ ವಲಯದ ವಾಯುಪ್ರದೇಶವನ್ನು ಸೇನಾ ಚಟುವಟಿಕೆಗಳಿಗೆ ಕಾಯ್ದಿರಿಸಲಾಗಿದೆ. ಬಿಕಾನೇರ್ ಪ್ರದೇಶದ ಸುತ್ತಮುತ್ತಲಿನ ವಾಯುಪ್ರದೇಶವೂ ನಿರ್ಬಂಧಿತ ವಲಯದ ವ್ಯಾಪ್ತಿಗೆ ಬಂದಿದೆ. ಕಾಯ್ದಿರಿಸಲಾದ ವಾಯುಪ್ರದೇಶವು ಸುಮಾರು 40,000 ಅಡಿ ಎತ್ತರದವರೆಗೆ ವಿಸ್ತರಿಸಲಿದೆ ಎಂದು ವರದಿಗಳು ತಿಳಿಸಿವೆ. ಕೆಲವು ಭಾಗಗಳು ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 20 ಕಿ.ಮೀ. ಸಮೀಪದಲ್ಲಿವೆ. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಯಡವಟ್ಟು – ಶ್ರೀನಗರ ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್ ಕಂಬಕ್ಕೆ ಇಂಡಿಗೋ ವಿಮಾನ ಡಿಕ್ಕಿ
ಭಾರತ ಹೊರಡಿಸಿರುವ NOTAM ಅನ್ನು ಪರಿಶೀಲಿಸಲು ಪಾಕಿಸ್ತಾನದ ರಕ್ಷಣಾ ಸಚಿವಾಲಯ ತುರ್ತು ಸಭೆ ನಡೆಸಿದೆ. ಗಡಿ ಪ್ರದೇಶದ ಸಮೀಪ ಇಷ್ಟು ದೀರ್ಘ ಅವಧಿಗೆ ವಾಯುಪ್ರದೇಶ ಕಾಯ್ದಿರಿಸಿರುವುದನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸುತ್ತಿದೆ. ಭಾರತದ ಘೋಷಣೆಯ ಹಿನ್ನೆಲೆಯಲ್ಲಿ ಪಾಕಿಸ್ತಾನವು ಗಡಿಯಲ್ಲಿ ಭದ್ರತೆ ಹಾಗೂ ಕಣ್ಗಾವಲು ಹೆಚ್ಚಿಸಿದ್ದು, ಭದ್ರತಾ ಪಡೆಗಳನ್ನು ಹೆಚ್ಚಿನ ಎಚ್ಚರಿಕೆಯಲ್ಲಿರಿಸಿದೆ. ಭಾರತೀಯ ವಾಯುಪಡೆಯ ಚಟುವಟಿಕೆಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಏಕಕಾಲದಲ್ಲಿ ಎರಡು ಪ್ರಮುಖ ಅಭ್ಯಾಸ
ಈ NOTAM ಅವಧಿಯು ಭಾರತೀಯ ವಾಯುಪಡೆಯ ಹಲವು ಪ್ರಮುಖ ಅಭ್ಯಾಸಗಳೊಂದಿಗೆ ಹೊಂದಿಕೆಯಾಗುತ್ತಿದೆ. ಸೆಪ್ಟೆಂಬರ್ 9ರಿಂದ 21ರವರೆಗೆ ಭಾರತ–ಜಪಾನ್ ‘ವೀರ್ ಗಾರ್ಡಿಯನ್ 26’ ಜಂಟಿ ವಾಯುಸೇನಾ ಅಭ್ಯಾಸ ನಡೆಯಲಿದೆ. ಈ ಅಭ್ಯಾಸದಲ್ಲಿ ಜಪಾನ್‌ನ ಮೂರು F-2A ಯುದ್ಧವಿಮಾನಗಳು ಹಾಗೂ ಸುಮಾರು 110 ಸಿಬ್ಬಂದಿ ಭಾಗವಹಿಸಲಿದ್ದಾರೆ. ಭಾರತೀಯ ವಾಯುನೆಲೆಯಲ್ಲಿ ಜಪಾನ್‌ನ ಯುದ್ಧವಿಮಾನಗಳು ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲ ಬಾರಿಗೆ ಎಂದು ವರದಿಯಾಗಿದೆ.
ಇದಾದ ಬಳಿಕ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 12ರವರೆಗೆ ಜೋಧಪುರದಲ್ಲಿ ‘ತರಂಗ್ ಶಕ್ತಿ 2026’ ಬಹುರಾಷ್ಟ್ರೀಯ ವಾಯುಸೇನಾ ಅಭ್ಯಾಸ ನಡೆಯಲಿದೆ. ಹಲವು ದೇಶಗಳ ವಾಯುಪಡೆಗಳು ಇದರಲ್ಲಿ ಭಾಗವಹಿಸಲಿದ್ದು, ಯುದ್ಧವಿಮಾನಗಳ ಕಾರ್ಯಾಚರಣೆ, ಸಮನ್ವಯ ಮತ್ತು ಯುದ್ಧ ಸಿದ್ಧತೆಯನ್ನು ಪರೀಕ್ಷಿಸುವ ಉದ್ದೇಶ ಹೊಂದಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದಿಢೀರ್ 300 ಅಡಿ ಕುಸಿತ ಕೇಸ್; ಸಹ-ಪೈಲಟ್ ಮಾದಕವಸ್ತು ಸೇವಿಸಿದ್ದು ದೃಢ
NOTAM ಎಂದರೇನು?
NOTAM ಎಂದರೆ ವಿಮಾನಯಾನಕ್ಕೆ ಸಂಬಂಧಿಸಿದ ಅಧಿಕೃತ ಸೂಚನೆ. ತಾತ್ಕಾಲಿಕವಾಗಿ ವಾಯುಪ್ರದೇಶದಲ್ಲಿ ನಿರ್ಬಂಧ, ಸೇನಾ ಅಭ್ಯಾಸ, ಶಸ್ತ್ರಾಸ್ತ್ರ ಪರೀಕ್ಷೆ ಅಥವಾ ವಿಮಾನಗಳ ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳ ಕುರಿತು ವಿಮಾನಯಾನ ಸಂಸ್ಥೆಗಳು ಮತ್ತು ಪೈಲಟ್‌ಗಳಿಗೆ ಮುಂಚಿತವಾಗಿ ಮಾಹಿತಿ ನೀಡಲು ಇದನ್ನು ಬಳಸಲಾಗುತ್ತದೆ. ಆದ್ದರಿಂದ NOTAM ಹೊರಡಿಸಿರುವುದೇ ಭಾರತ ದಾಳಿ ನಡೆಸಲಿದೆ ಎಂಬುದರ ನೇರ ಸೂಚನೆಯಲ್ಲ; ಸೇನಾ ಅಭ್ಯಾಸಗಳ ಸಂದರ್ಭದಲ್ಲಿ ಇದು ಸಾಮಾನ್ಯ ವಾಯುಪ್ರದೇಶ ನಿರ್ವಹಣಾ ಕ್ರಮವಾಗಿದೆ.
