ನವದೆಹಲಿ: ಕಾಂಗ್ರೆಸ್ (Congress) ನಾಯಕಿ ಹಾಗೂ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ಬಹುನಿರೀಕ್ಷಿತ ಆತ್ಮಕಥೆ ‘Belonging: A Journey of Love’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ (HarperCollins) ಮೂಲಕ ಪ್ರಕಟವಾಗಲಿದೆ.
ಈ ಹಿಂದೆ ಪುಸ್ತಕದ ಭಾರತೀಯ ಪ್ರಕಟಣೆಯ ವಿಚಾರದಲ್ಲಿ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ (Penguin) ಹೆಸರು ಕೇಳಿಬಂದಿದ್ದರೂ, ಇದೀಗ ಹಾರ್ಪರ್‌ಕಾಲಿನ್ಸ್ ಇಂಡಿಯಾ ಪುಸ್ತಕವನ್ನು ಪ್ರಕಟಿಸುವುದಾಗಿ ಘೋಷಿಸಿದೆ. ಪುಸ್ತಕವು ವಿಶ್ವಾದ್ಯಂತ ನವೆಂಬರ್ 10, 2026ರಂದು ಬಿಡುಗಡೆಯಾಗಲಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆ `ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪ್ರಕಟಣೆಯಿಂದ ಹಿಂದೆ ಸರಿದ ಪೆಂಗ್ವಿನ್ ಇಂಡಿಯಾ
ಪುಸ್ತಕದ ಪ್ರಕಟಣೆಗೆ ಸಂಬಂಧಿಸಿದಂತೆ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಹಿಂದೆ ಸ್ಪಷ್ಟನೆ ನೀಡಿತ್ತು. ಸೋನಿಯಾ ಗಾಂಧಿ ಅವರು ಸಂಪಾದಕೀಯ ಬದಲಾವಣೆಗಳನ್ನು ಒಪ್ಪದ ಕಾರಣ ಪೆಂಗ್ವಿನ್ ಪುಸ್ತಕದಿಂದ ಹಿಂದೆ ಸರಿಯಿತು ಎಂಬ ವರದಿಗಳನ್ನು ಸಂಸ್ಥೆ ತಳ್ಳಿಹಾಕಿತ್ತು.

ಪುಸ್ತಕ ಪ್ರಕಟಿಸಲು ತಾವು ಸಿದ್ಧರಾಗಿದ್ದೆವು ಮತ್ತು ಆಸಕ್ತಿ ಹೊಂದಿದ್ದೆವು ಎಂದು ಸಂಸ್ಥೆ ಹೇಳಿತ್ತು. ಲೇಖಕರ ಕೃತಿಯಲ್ಲಿರುವ ಮಾಹಿತಿಯನ್ನು ಪರಿಶೀಲಿಸುವುದು ಹಾಗೂ ಸಂಪಾದಕೀಯ ಸಲಹೆ ನೀಡುವುದು ಪ್ರಕಟಕರ ಸಾಮಾನ್ಯ ಜವಾಬ್ದಾರಿ ಎಂದು ಅದು ತಿಳಿಸಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ ಭಾರತದಲ್ಲಿ ಪುಸ್ತಕದ ಪ್ರಕಟಣೆಯ ಹೊಣೆ ಹಾರ್ಪರ್‌ಕಾಲಿನ್ಸ್‌ಗೆ ಸಿಕ್ಕಿದೆ. ಸೋನಿಯಾ ಗಾಂಧಿ ಅವರ ಆತ್ಮಕಥೆ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಹಲವು ಪ್ರಮುಖ ಘಟನೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಆತ್ಮಕಥೆಯಲ್ಲಿ ಏನಿರಲಿದೆ?
79 ವರ್ಷದ ಸೋನಿಯಾ ಗಾಂಧಿ ತಮ್ಮ ಜೀವನದ ಹಲವು ಅಪರೂಪದ ವೈಯಕ್ತಿಕ ಅನುಭವಗಳನ್ನು ಈ ಕೃತಿಯಲ್ಲಿ ಹಂಚಿಕೊಳ್ಳಲಿದ್ದಾರೆ. ಇಟಲಿಯಲ್ಲಿನ ಬಾಲ್ಯ, ಕೇಂಬ್ರಿಡ್ಜ್‌ನಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾದದ್ದು, ವಿವಾಹ, ಭಾರತದ ಪ್ರಮುಖ ರಾಜಕೀಯ ಕುಟುಂಬದ ಭಾಗವಾದದ್ದು ಸೇರಿದಂತೆ ಹಲವು ವಿಚಾರಗಳು ಪುಸ್ತಕದಲ್ಲಿರಲಿವೆ.
ಅತ್ತೆ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ, ಪತಿ ರಾಜೀವ್ ಗಾಂಧಿ ಹತ್ಯೆ, ಆ ಬಳಿಕ ಸೋನಿಯಾ ಗಾಂಧಿ ಸಾರ್ವಜನಿಕ ಜೀವನ ಮತ್ತು ರಾಜಕೀಯಕ್ಕೆ ಪ್ರವೇಶಿಸಿದ ಸಂದರ್ಭಗಳೂ ಆತ್ಮಕಥೆಯಲ್ಲಿ ಪ್ರಮುಖ ಸ್ಥಾನ ಪಡೆಯುವ ನಿರೀಕ್ಷೆಯಿದೆ. 2004ರಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ಸ್ವೀಕರಿಸದ ನಿರ್ಧಾರ ಸೇರಿದಂತೆ ಅವರ ರಾಜಕೀಯ ಪಯಣದ ಪ್ರಮುಖ ಘಟ್ಟಗಳ ಬಗ್ಗೆಯೂ ವಿವರಗಳು ಇರಲಿವೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆ ವಿವಾದ – ಕಾಂಗ್ರೆಸ್ ‘ಸೆನ್ಸಾರ್’ ಆರೋಪ; ಬಿಜೆಪಿಯಿಂದ ತಿರುಗೇಟು
