– ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆ, ಇಟಲಿಯಿಂದ – ಭಾರತದ ವರೆಗಿನ ಪ್ರಯಾಣದ ಬಗ್ಗೆ ಉಲ್ಲೇಖ
ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥನ ‘Belonging: A Journey of Love’ (ಬಿಲಾಂಗಿಂಗ್: ಎ ಜರ್ನಿ ಆಫ್ ಲವ್) ಕೃತಿಯನ್ನು ಭಾರತದಲ್ಲಿ (India) ಪ್ರಕಟಿಸುವುದಿಲ್ಲ ಎಂದು ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ (PRHI) ಸ್ಪಷ್ಟಪಡಿಸಿದೆ.
ಸೋನಿಯಾ ಗಾಂಧಿ ಅವರು ಹಸ್ತಪ್ರತಿಯಲ್ಲಿ ಸೂಚಿಸಿದ್ದ ಸಂಪಾದಕೀಯ ಬದಲಾವಣೆಗಳು ಹಾಗೂ ಕೆಲವು ಭಾಗಗಳನ್ನು ತೆಗೆದುಹಾಕುವ ಬೇಡಿಕೆಯನ್ನು ಪೆಂಗ್ವಿನ್ ತಿರಸ್ಕರಿಸಿದ್ದರಿಂದ ಪ್ರಕಾಶನ ಒಪ್ಪಂದದಿಂದ ಹಿಂದೆ ಸರಿಯಿತು ಎಂಬ ಮಾಧ್ಯಮ ವರದಿಗಳ ಬೆನ್ನಲ್ಲೇ ಸಂಸ್ಥೆ ಸ್ಪಷ್ಟನೆ ನೀಡಿದೆ.
Penguin Random House India official statement. pic.twitter.com/2g8y3F1p7m
— Penguin India (@PenguinIndia) August 28, 2026
ಸೋನಿಯಾ ಗಾಂಧಿ ಅವರ ಆತ್ಮಕಥೆಯಲ್ಲಿ (Sonia Gandhi Memoir) ಕೆಲ ಬದಲಾವಣೆಗಳನ್ನ ಕೋರಿದ್ದೆವು. ಇದಕ್ಕೆ ಸೋನಿಯಾ ಗಾಂಧಿ ಅವರು ಒಪ್ಪದ ಕಾರಣ ಪುಸ್ತಕ ಪ್ರಕಟಣೆಯಿಂದ ಪೆಂಗ್ವಿನ್ ಇಂಡಿಯಾ ಹಿಂದೆ ಸರಿದಿದೆ ಎಂದು ಹೇಳಲಾಗಿತ್ತು. ವದಂತಿಗಳನ್ನ ಸಂಪೂರ್ಣವಾಗಿ ತಳ್ಳಿಹಾಕಿರುವ ಪೆಂಗ್ವಿನ್ ಇಂಡಿಯಾ, ಲೇಖಕಿ ಸಂಪಾದಕೀಯ ಸಲಹೆಗಳನ್ನು ಒಪ್ಪದ ಕಾರಣ ಪುಸ್ತಕವನ್ನ ಪ್ರಕಟಿಸದಿರಲು ನಿರ್ಧರಿಸಲಾಗಿದೆ ಎಂಬ ಹೇಳಿಕೆಗಳು ವಾಸ್ತವ ಪರಿಸ್ಥಿತಿಯನ್ನು ಸರಿಯಾಗಿ ಬಿಂಬಿಸುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
‘ಪುಸ್ತಕ ಪ್ರಕಟಿಸಲು ನಾವು ಉತ್ಸುಕರಾಗಿದ್ದೆವು’
ಪೆಂಗ್ವಿನ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ, ಸೋನಿಯಾ ಗಾಂಧಿ ಅವರ ಪುಸ್ತಕವನ್ನು ಪ್ರಕಟಿಸಲು ತಾವು ಬಹಳ ಉತ್ಸುಕರಾಗಿದ್ದೆವು ಎಂದು ತಿಳಿಸಿದೆ.
ಅಲ್ಲದೇ, ಸೋನಿಯಾ ಗಾಂಧಿ ಅವರೊಂದಿಗೆ ನಡೆದ ಮಾತುಕತೆಗಳನ್ನೂ ಉಲ್ಲೇಖಿಸಿರುವ ಸಂಸ್ಥೆ, ಪ್ರಕಾಶಕರಾಗಿ ಪುಸ್ತಕದಲ್ಲಿರುವ ಮಾಹಿತಿಯ ವಾಸ್ತವಾಂಶಗಳನ್ನ ಪರಿಶೀಲಿಸುವುದು ಹಾಗೂ ಕೃತಿಯ ಹಿತದೃಷ್ಟಿಯಿಂದ ಲೇಖಕರಿಗೆ ಅಗತ್ಯ ಸಲಹೆಗಳನ್ನು ನೀಡುವುದು ನಮ್ಮ ಹಕ್ಕು ಮತ್ತ ಜವಾಬ್ದಾರಿಯಾಗಿದೆ. ಇಂತಹ ಸಂಪಾದಕೀಯ ಚರ್ಚೆಗಳು ಪ್ರಕಾಶನ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿವೆ ಎಂದು ಪೆಂಗ್ವಿನ್ ಸ್ಪಷ್ಟಪಡಿಸಿದೆ.

ಅದೇ ವೇಳೆ, ಲೇಖಕಿ ಮತ್ತು ಪ್ರಕಾಶನ ಸಂಸ್ಥೆಯ ನಡುವೆ ನಡೆದಿರುವ ಚರ್ಚೆಗಳ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಪೆಂಗ್ವಿನ್ ತಿಳಿಸಿದೆ.
ಹಕ್ಕುಗಳಿಗಾಗಿ ಹಾರ್ಪರ್‌ಕಾಲಿನ್ಸ್ ಮುಂಚೂಣಿಯಲ್ಲಿ
ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಪುಸ್ತಕವನ್ನ ಪ್ರಕಟಿಸುವುದಿಲ್ಲ ಎಂಬ ಸ್ಪಷ್ಟನೆ ಹೊರಬಂದ ಬೆನ್ನಲ್ಲೇ, ಕೃತಿಯ ಭಾರತೀಯ ಪ್ರಕಾಶನ ಹಕ್ಕುಗಳನ್ನು ಪಡೆಯಲು ಹಲವು ಪ್ರಕಾಶನ ಸಂಸ್ಥೆಗಳು ಆಸಕ್ತಿ ತೋರಿಸಿವೆ ಎನ್ನಲಾಗಿದೆ.
ವರದಿಗಳ ಪ್ರಕಾರ, ʻಹಾರ್ಪರ್‌ಕಾಲಿನ್ಸ್ ಇಂಡಿಯಾʼ ಈ ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸುವ ಹಾಗೂ ವಿತರಿಸುವ ಒಪ್ಪಂದವನ್ನ ಅಂತಿಮಗೊಳಿಸುವ ಹಂತಕ್ಕೆ ತಲುಪಿದೆ. ಶೀಘ್ರದಲ್ಲೇ ಈ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನ.10ರಂದು ಬಿಡುಗಡೆ
ಪೆಂಗ್ವಿನ್ ರ‍್ಯಾಂಡಮ್ ಹೌಸ್‌ನ ಪ್ರಮುಖ ಅಮೆರಿಕನ್ ಇಂಪ್ರಿಂಟ್ ಆಲ್ಫ್ರೆಡ್ ಎ. ನಾಫ್ (Alfred A. Knopf) ಸೋನಿಯಾ ಗಾಂಧಿ ಅವರ ಆತ್ಮಕಥನವು ನವೆಂಬರ್ 10 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ.
ಇನ್ನೂ ತಮ್ಮ ಪುಸ್ತಕದ ಕುರಿತು ಸೋನಿಯಾ ಗಾಂಧಿ ಮಾತನಾಡುತ್ತಾ, ತಮ್ಮ ಕುಟುಂಬದ ಬಗ್ಗೆ ಸಾಕಷ್ಟು ಬರೆಯಲಾಗಿದ್ದರೂ, ತಮ್ಮ ಪ್ರೇರಣೆಗಳು, ಕಾರ್ಯಗಳು ಮತ್ತು ಮಾನವೀಯ ದೌರ್ಬಲ್ಯಗಳ ನೈಜತೆಯನ್ನು ತಲುಪುವ ವಿವರಗಳು ಬಹಳ ಕಡಿಮೆ. ಕಳೆದ 6 ದಶಕಗಳಲ್ಲಿ ಭಾರತದಲ್ಲಿ ತಾವು ಕಂಡಿರುವ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ಕುರಿತು ಓದುಗರಿಗೆ ಈ ಕೃತಿ ವಿಭಿನ್ನ ದೃಷ್ಟಿಕೋನ ನೀಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಾಲ್ಯದಿಂದ ರಾಜಕೀಯದವರೆಗಿನ ಜೀವನ ಪಯಣ
‘Belonging: A Journey of Love’ ಕೃತಿಯಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಬಾಲ್ಯದಿಂದ ರಾಜಕೀಯ ಜೀವನದವರೆಗಿನ ಹಲವು ಪ್ರಮುಖ ಘಟನೆಗಳನ್ನು ದಾಖಲಿಸಿದ್ದಾರೆ.
1984ರಲ್ಲಿ ತಮ್ಮ ಅತ್ತೆ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಮತ್ತು ಅದರ 7 ವರ್ಷಗಳ ಬಳಿಕ ತಮ್ಮ ಪತಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ತಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದ ಘಟನೆಗಳಾಗಿದ್ದವು ಎಂಬುದನ್ನು ಅವರು ಕೃತಿಯಲ್ಲಿ ವಿವರಿಸಿದ್ದಾರೆ. ಇಟಲಿಯಿಂದ ಭಾರತಕ್ಕೆ ಬಂದ ತಮ್ಮ ಜೀವನ ಪಯಣ, ರಾಜೀವ್ ಗಾಂಧಿ ಅವರೊಂದಿಗೆ ನಡೆದ ವಿವಾಹ ಹಾಗೂ ನೆಹರು-ಗಾಂಧಿ ಕುಟುಂಬದೊಳಗಿನ ತಮ್ಮ ಜೀವನದ ಹಲವು ಅನುಭವಗಳನ್ನ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
2ನೇ ವಿಶ್ವಯುದ್ಧದ ನಂತರದ ಇಟಲಿಯಲ್ಲಿ ಕಳೆದ ಬಾಲ್ಯದಿಂದ ಭಾರತಕ್ಕೆ ಆಗಮಿಸಿದವರೆಗಿನ ಪಯಣವನ್ನೂ ಸೋನಿಯಾ ಗಾಂಧಿ ಅವರು ವಿವರವಾಗಿ ದಾಖಲಿಸಿದ್ದಾರೆ. ಇದರೊಂದಿಗೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯ ದುರಂತ, ರಾಜಕೀಯ ಪ್ರವೇಶ, 2004ರಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ನಿರಾಕರಿಸಿದ ನಿರ್ಧಾರ ಸೇರಿದಂತೆ ತಮ್ಮ ಸಾರ್ವಜನಿಕ ಜೀವನದ ಹಲವು ಮಹತ್ವದ ಘಟನೆಗಳನ್ನೂ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಪ್ರೀತಿ, ಗುರುತು, ಕರ್ತವ್ಯ ಹಾಗೂ ಕಳೆದ ಆರು ದಶಕಗಳಲ್ಲಿ ಭಾರತ ಕಂಡ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ಕುರಿತು ತಮ್ಮ ವೈಯಕ್ತಿಕ ಆಲೋಚನೆಗಳನ್ನು ಸಹ ಅವರು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
‘ಸ್ವಂತ ಜೀವನದ ಬಗ್ಗೆ ಬರೆಯುವುದು ಸುಲಭವಾಗಿರಲಿಲ್ಲ’
ತಮ್ಮ ಜೀವನದ ಕುರಿತು ಪುಸ್ತಕ ಬರೆಯುವ ಅನುಭವದ ಬಗ್ಗೆ ಮಾತನಾಡಿರುವ ಸೋನಿಯಾ ಗಾಂಧಿ, ತಮ್ಮ ಜೀವನವನ್ನು ಬರಹದ ರೂಪದಲ್ಲಿ ದಾಖಲಿಸುವುದು ತಮಗೆ ಸುಲಭದ ಕೆಲಸವಾಗಿರಲಿಲ್ಲ ಎಂದು ಹೇಳಿದ್ದಾರೆ.
