ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಬಹುನಿರೀಕ್ಷಿತ ಆತ್ಮಕಥೆ ‘Belonging: A Journey of Love’ ಪ್ರಕಟಣೆಗೆ ಮುನ್ನವೇ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪುಸ್ತಕದ ಭಾರತದಲ್ಲಿನ ಪ್ರಕಟಣೆಯಿಂದ ಹಿಂದೆ ಸರಿದಿರುವ ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ನಿರ್ಧಾರವನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಸರ್ಕಾರದ ಒತ್ತಡದಿಂದಾಗಿ ಪುಸ್ತಕ ಪ್ರಕಟಣೆಗೆ ತಡೆ ಉಂಟಾಗಿದೆ ಎಂಬ ಆರೋಪ ಮಾಡಿದೆ.
ಸೋನಿಯಾ ಗಾಂಧಿಯವರ ಸುಮಾರು 544 ಪುಟಗಳ ಆತ್ಮಕಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳ ಕುರಿತ ಉಲ್ಲೇಖಗಳಿವೆ ಎನ್ನಲಾಗಿದೆ. ಪುಸ್ತಕದ ಕೆಲವು ಭಾಗಗಳಿಗೆ ಸಂಬಂಧಿಸಿದಂತೆ ಪ್ರಕಾಶಕರು ಸಂಪಾದಕೀಯ ಪರಿಶೀಲನೆ ಹಾಗೂ ವಾಸ್ತವಾಂಶ ಫ್ಯಾಕ್ಟ್ ಚೆಕ್ ನಡೆಸಲು ಮುಂದಾಗಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆತ್ಮಕಥೆ `ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪ್ರಕಟಣೆಯಿಂದ ಹಿಂದೆ ಸರಿದ ಪೆಂಗ್ವಿನ್ ಇಂಡಿಯಾ
ಕಾಂಗ್ರೆಸ್ ಆರೋಪವೇನು?
ಪ್ರಕಾಶನ ಸಂಸ್ಥೆ ಭಾರತದಲ್ಲಿ ಪುಸ್ತಕ ಪ್ರಕಟಿಸುವುದರಿಂದ ಹಿಂದೆ ಸರಿದಿರುವುದನ್ನು ಕಾಂಗ್ರೆಸ್ ಗಂಭೀರವಾಗಿ ಪ್ರಶ್ನಿಸಿದೆ. ಪುಸ್ತಕದ ವಿಷಯಗಳು ರಾಜಕೀಯವಾಗಿ ಸೂಕ್ಷ್ಮವಾಗಿರುವುದರಿಂದ ಸರ್ಕಾರದ ಒತ್ತಡ ಅಥವಾ ಹಸ್ತಕ್ಷೇಪ ಇರಬಹುದೇ ಎಂಬ ಅನುಮಾನವನ್ನು ಪಕ್ಷ ವ್ಯಕ್ತಪಡಿಸಿದೆ. ಈ ಬೆಳವಣಿಗೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೆನ್ಸಾರ್‌ಶಿಪ್ ವಿಚಾರಕ್ಕೆ ಕಾಂಗ್ರೆಸ್ ಜೋಡಿಸಿದೆ.
ಬಿಜೆಪಿಯಿಂದ ತಿರುಗೇಟು
ಕಾಂಗ್ರೆಸ್ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು, ಇದನ್ನು ರಾಜಕೀಯವಾಗಿ ರೂಪಿಸಲಾಗುತ್ತಿರುವ ‘ಸುಳ್ಳು ನಿರೂಪಣೆ’ ಎಂದು ಪ್ರತಿಪಾದಿಸಿದೆ. ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಪುಸ್ತಕದ ಬಗ್ಗೆ ಪ್ರಕಾಶಕರ ಫ್ಯಾಕ್ಟ್ ಚೆಕಿಂಗ್ ಪ್ರಕ್ರಿಯೆಯನ್ನು ಪ್ರಶ್ನಿಸಿ, ವೈಯಕ್ತಿಕ ನೆನಪುಗಳನ್ನು ಕೂಡ ವಾಸ್ತವಾಂಶಗಳ ದೃಷ್ಟಿಯಿಂದ ಪರಿಶೀಲಿಸಬೇಕೇ ಎಂಬ ವ್ಯಂಗ್ಯಾತ್ಮಕ ಪ್ರಶ್ನೆ ಎತ್ತಿದ್ದಾರೆ. ಈ ವಿವಾದದ ನಡುವೆ ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ, ‘Belonging’ ಪುಸ್ತಕದ ಭಾರತದ ಪ್ರಕಾಶಕರಾಗಿ ತಾವು ಇಲ್ಲ ಎಂದು ಸ್ಪಷ್ಟಪಡಿಸಿದೆ. ಪುಸ್ತಕದ ಸಂಪಾದಕೀಯ ಬದಲಾವಣೆಗಳ ಕುರಿತ ಆರೋಪಗಳಿಂದ ಸಂಸ್ಥೆ ದೂರ ಉಳಿದಿದೆ. ಇದನ್ನೂ ಓದಿ: ಖರ್ಗೆ ವೇದಿಕೆ ಶುದ್ಧೀಕರಿಸಿದವರ ವಿರುದ್ಧ FIR ಗೆ ಮೋದಿ ಆದೇಶಿಸಬೇಕು: ರಾಹುಲ್ ಗಾಂಧಿ ಒತ್ತಾಯ
