ಅದು ಸಂಬಂಧಗಳನ್ನ ಗಟ್ಟಿಗೊಳಿಸುವ ಮಹತ್ವದ ದಿನ, ಸಹೋದರ-ಸಹೋದರಿಯರ ನಡುವೆ ವಿಶ್ವಾಸ ಬರಿಸುವ ದಿನ, ತಂಗಿಯೊಬ್ಬಳು ತನ್ನ ಅಣ್ಣನಿಗೆ ಯಶಸ್ಸು, ಆರೋಗ್ಯ, ಶ್ರೇಯೋಭಿವೃದ್ಧಿ ಹಾಗೂ ನೆಮ್ಮದಿ ಕರುಣಿಸಲೆಂದು ದೇವರಲ್ಲಿ ಕೇಳಿಕೊಳ್ಳುವ ದಿನ ಸಿಹಿ ಬಾಯಿಗೆ ಇಟ್ಟು ಅಣ್ಣನಿಂದಲೇ ತಂಗಿಯ ರಕ್ಷಣೆ, ತಂಗಿಯಿಂದಲೇ ಅಣ್ಣನ ರಕ್ಷಣೆ ಎಂಬ ಪರಸ್ಪರ” ನಂಬುಗೆಯ ಭಾವನೆ ಸಾರುವ ದಿನ- ರಕ್ಷಾ ಬಂಧನ!
ಸಂಸ್ಕೃತಿ, ಪಾರಂಪರಿಕ ಆಚರಣೆಗಳ ಆಗರವೇ ಆಗಿರುವ ಭಾರತದಲ್ಲಿ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸುವ ಆಚರಣೆಯಾಗಿ ರೂಪುಗೊಂಡಿರುವ ಈ ರಕ್ಷಾ ಬಂಧನವನ್ನು ಆಚರಿಸುವ ರೀತಿಯೇ ವಿಭಿನ್ನ. ಈ ಬಾರಿಯ ರಕ್ಷಾ ಬಂಧನ ಆಗಸ್ಟ್ 28 ರ ಈ ದಿನ ಬಂದಿದೆ.

ಬಣ್ಣ-ಬಣ್ಣದ, ಚಿತ್ರ-ವಿಚಿತ್ರದ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈ ನಡುವೆ ಕೆಲವರು ಪರಿಸರ ಸ್ನೇಹಿ ರಾಖಿಗಳನ್ನೂ ಬಳಸುತ್ತಾರೆ. ಕೈಗೆ ರಕ್ಷಾ ಬಂಧನದ ರಾಖಿಯನ್ನು ಕಟ್ಟುವುದು ರಕ್ಷಾ ಬಂಧನದ ವೈಶಿಷ್ಟ್ಯ. ಸಹೋದರಿಯರ ಆಚರಣೆಯಷ್ಟೇ ಅಲ್ಲ. ಸ್ನೇಹಿತರ ನಡುವೆ ಭ್ರಾತೃತ್ವ ಸಂಬಂಧವನ್ನೂ ಗಟ್ಟಿಗೊಳಿಸುವ ಆಚರಣೆಯೂ ಆಗಿದೆ. ಸಹೋದರ-ಸಹೋದರಿಯರ ನಡುವೆ ಪ್ರೀತಿ, ಕಾಳಜಿ ಮತ್ತು ಭಾವನೆ ಇರುವವರಿಗೆ ರಾಖಿ ಕಟ್ಟುವ ಮೂಲಕ ಹಬ್ಬದ ಸಂದೇಶ ಸಾರುತ್ತಾರೆ.
ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿ
ಮುತ್ತಿನ ಸರ, ವಜ್ರದ ಹರಳು ಬಳಸಿ ಮಾಡಿದ, ನಕ್ಷತ್ರ ರಾಖಿ, ಮಕ್ಕಳ ಆಕರ್ಷಣೆಯಾದ ಮೈಟ ರಾಜು, ಛೋಟಾ ಭೀಮ್, ಟಾಮ್ ಅಂಡ್ ಜರ್ರಿ, ಡೋರೇಮೋನ್, ಗೃಹಿಣಿಯರಿಗೆ ಪ್ರಿಯವಾದ ದೇವರ ಮೂರ್ತಿಗಳ ರಾಖಿಗಳು, ಪ್ಲಾಸ್ಟಿಕ್ ಹಾಗೂ ಬೀಜಗಳನ್ನೇ ಬಳಸಿ ಸಿದ್ಧಪಡಿಸಲಾಗಿರುವ ಪರಿಸರ ಸ್ನೇಹಿ ರಾಖಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆನ್‌ಲೈನ್ ಮಾರುಕಟ್ಟೆಯಲ್ಲೂ ಚಿತ್ತಾಕರ್ಷಕ ರಾಖಿಗಳು ಲಭ್ಯವಿದ್ದು, ಸಂತಸದಿಂದಲೇ ಜನರು ಕೊಳ್ಳುತ್ತಿದ್ದಾರೆ.

ಡಿಜಿಟಲ್ ರಾಖಿ
ಜೀವನ ಶೈಲಿ ಬದಲಾದಂತೆ ರಕ್ಷಾ ಬಂಧನ ಆಧುನಿಕತೆಯ ರೂಪ ತಳೆದಿದೆ. ದೂರದಲ್ಲಿರುವ ಸಂಬಂಧಗಳನ್ನು ಗಟ್ಟಿಗೊಳಿಸುವ ರಾಖಿಯನ್ನು ಅಂಚೆ ಮೂಲಕ ಕಳುಹಿಸಲಾಗುತ್ತಿದೆ. ಕೆಲವರು ವಾಟ್ಸಪ್‌ನಲ್ಲೇ ರಾಖಿ ಸಿಂಬಲ್ ಕಳುಹಿಸಿ ನಗೆ ಬೀರುತ್ತಾರೆ. ಹಾಗಾಗಿ ರೂಢಿಗತ ಆಚರಣೆಗಳು ನವ ಪರಿಕಲ್ಪನೆಯ ಸ್ವರೂಪ ಪಡೆದು ರಕ್ಷಾ ಬಂಧನ ಶೈಲಿಯೇ ಬದಲಾಗುತ್ತಿದೆ.
ಆಚರಣೆಗೆ ಬಂದಿದ್ದು ಹೇಗೆ?
ರಕ್ಷಾ ಬಂಧನದ ಪುರಾಣಗಳಲ್ಲೂ ಉಲ್ಲೇಖಗಳಿವೆ. ಮಹಾಭಾರತದ ಭವಿಷ್ಯ ಪುರಾಣದ ಉತ್ತರಪರ್ವದಲ್ಲಿ ಶ್ರೀಕೃಷ್ಣನು ಧರ್ಮರಾಯನಿಗೆ ಶ್ರಾವಣ ಮಾಸದ ಹುಣ್ಣಿಮೆ ದಿನದಂದು ರಾಜಪುರೋಹಿತರಿಂದ ಬಲಗೈಗೆ ಪವಿತ್ರ ರಕ್ಷಾ ದಾರವನ್ನು ಕಟ್ಟಿಸಿಕೊಳ್ಳುವಂತೆ ಮಹತ್ವದ ಉಪದೇಶ ನೀಡುತ್ತಾನೆ. ಒಮ್ಮೆ ಶ್ರೀಕೃಷ್ಣ ಬೆರಳಲ್ಲಿ ತಿರುಗುತ್ತಿದ್ದ ಸುದರ್ಶನ ಚಕ್ರದಿಂದ ಗಾಯವಾಗುತ್ತದೆ. ಬೆರಳಿನಲ್ಲಿ ರಕ್ತ ಧಾರಾಕಾರವಾಗಿ ಸೋರುತ್ತಿದ್ದುದನ್ನು ಗಮನಿಸಿದ ದ್ರೌಪದಿ, ಕೃಷ್ಣನ ಕೈಗೆ ಕಟ್ಟಲು ಸೀರೆ ತುಣುಕನ್ನು ಹರಿದು ರಕ್ತ ಸೋರುವುದನ್ನು ನಿಲ್ಲಿಸುತ್ತಾಳೆ. ಇದರಿಂದ ಕಷ್ಟ-ಕಾರ್ಪಣ್ಯಗಳು ಎದುರಾದರೂ ರಕ್ಷಣೆ ಮಾಡುವುದಾಗಿ ಕೃಷ್ಣ ಆಶ್ವಾಸನೆ ನೀಡುತ್ತಾನೆ. ಕೃಷ್ಣನ ಕೈಗೆ ದ್ರೌಪದಿ ಕಟ್ಟಿದ ಸೀರೆ ತುಣುಕು ರಕ್ಷಾ ಬಂಧನ ರೂಪ ಪಡೆಯುತ್ತದೆ ಎಂಬುದು ಪುರಾಣಗಳ ಉಲ್ಲೇಖ.

ಸಹೋದರಿಯರ ಭಾವನೆ
ʻʻಪ್ರತಿ ವರ್ಷ ಅಕ್ಕನೋ, ತಂಗಿಯೋ ರಾಖಿ ಕಟ್ಟುತ್ತಾರೆ. ನನಗೆ ಇಷ್ಟವಾಗುವ ಒಂದು ಗಿಫ್ಟ್ ಕೊಡುತ್ತಾರೆ. ಏನೇ ಕೊಟ್ಟರೂ ಪ್ರೀತಿ, ಕಾಳಜಿಗಿಂತ ದೊಡ್ಡ ಉಡುಗೊರೆ ಇಲ್ಲ. ಸಹೋದರಿಯರು ಒಬ್ಬರನ್ನೊಬ್ಬರು ರಕ್ಷಿಸಬಲ್ಲರುʼʼ ಎನ್ನುವುದು ಅವರ ಆಶಯವಾಗಿದೆ.
