Connect with us

IPL Stories

ಪಂಜಾಬ್ ಪ್ಲೇ ‘ಆಫ್’ – ಸ್ಟೋಕ್ಸ್, ಸ್ಯಾಮ್ಸನ್ ಆಟಕ್ಕೆ ರಾಹುಲ್ ಪಡೆಗೆ ಸೋಲು

Published

on

– ಗೇಲ್ 99 ರನ್‍ಗಳ ಆಟ ವ್ಯರ್ಥ
– ಪಂಜಾಬ್ ಗೆಲುವಿನ ಓಟಕ್ಕೆ ರಾಯಲ್ಸ್ ಬ್ರೇಕ್

ಅಬುಧಾಬಿ: ಇಂದು ನಡೆದ ಐಪಿಎಲ್-2020ಯ 50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದೆ. ಜೊತೆಗೆ ಪಂಜಾಬ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಜೊತೆಗೆ ಸುಲಭವಾಗಿ ಪ್ಲೇ ಆಫ್ ತಲುಪುವ ದಾರಿಯನ್ನು ಪಂಜಾಬ್ ಕಳೆದುಕೊಂಡಿದೆ.

ಇಂದು ಅಬುಧಾಬಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕ್ರಿಸ್ ಗೇಲ್ 99 ರನ್ ಮತ್ತು ನಾಯಕ ಕೆಎಲ್ ರಾಹುಲ್ 46 ರನ್ ಸಹಾಯದಿಂದ ನಿಗದಿತ 20 ಓವರಿನಲ್ಲಿ ಬರೋಬ್ಬರಿ 185 ರನ್ ಪೇರಿಸಿತ್ತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ಸನ್ ಅದ್ಭುತ ಆಟದಿಂದ ಇನ್ನೂ 15 ಬಾಲ್ ಉಳಿದಂತೆ 186 ರನ್ ಸಿಡಿಸಿ 7 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಸ್ಟೋಕ್ಸ್, ಸ್ಯಾಮ್ಸನ್ ಸ್ಫೋಟಕ ಆಟ
ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಬಾಲಿನಿಂದಲೇ ಪಂಜಾಬ್ ಬೌಲರ್ ಗಳ ಮೇಲೆ ದಾಳಿ ಮಾಡಿತು. ಆರಂಭಿಕನಾಗಿ ಬಂದ ಬೆನ್ ಸ್ಟೋಕ್ಸ್ ಅವರು 24 ಬಾಲ್ ಗೆ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ ಅರ್ಧಶತಕ ಸಿಡಿಸಿ ಪಂದ್ಯಕ್ಕೆ ಉತ್ತಮ ಆರಂಭ ನೀಡಿದರು. ಇವರು ಔಟ್ ಆದ ನಂತರ ಬಂದ ಸಂಜು ಸ್ಯಾಮ್ಸನ್ ಅವರು, 25 ಬಾಲಿಗೆ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ 48 ರನ್ ಸಿಡಿಸಿ ರಾಜಸ್ಥಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪಂಜಾಬ್ ನೀಡಿದ 185 ರನ್‍ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ ಸ್ಫೋಟಕ ಆರಂಭ ನೀಡಿದರು. ಆರಂಭದಿಂದಲೇ ಅಬ್ಬರಿಸಿದ ಬೆನ್ ಸ್ಟೋಕ್ಸ್ 24 ಬಾಲ್ ಗೆ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ 6ನೇ ಓವರಿನಲ್ಲಿ ಕ್ರಿಸ್ ಜೋರ್ಡಾನ್ ಅವರ ಬೌಲಿಂಗ್ ಕ್ಯಾಚ್ ನೀಡಿ ಹೊರನಡೆದರು.

ಬೆನ್ ಸ್ಟೋಕ್ಸ್ ಔಟ್ ಆದ ನಂತರ ರಾಜಸ್ಥಾನ್ ರಾಯಲ್ಸ್ ತಂಡ ಆರನೇ ಓವರ್ ಮುಕ್ತಾಯಕ್ಕೆ 66 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟಕ್ಕೆ ಮುಂದಾದರು. ಆದರೆ 10ನೇ ಓವರ್ ಐದನೇ ಬಾಲಿನಲ್ಲಿ ಮುರುಗನ್ ಅಶ್ವಿನ್ ಅವರ ಬೌಲಿಂಗ್‍ನಲ್ಲಿ 30 ರನ್ ಗಳಿಸಿದ್ದ ರಾಬಿನ್ ಉತ್ತಪ್ಪ ಕ್ಯಾಚ್ ನೀಡಿ ಹೊರನಡೆದರು.

ನಂತರ ನಾಯಕ ಸ್ಟೀವನ್ ಸ್ಮಿತ್ ಅವರು ಕ್ರೀಸಿಗಿಳಿದರು. ಆದರೆ 25 ಬಾಲಿಗೆ 48 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ 14ನೇ ಓವರ್ ಎರಡನೇ ಬಾಲ್ ನಲ್ಲಿ ಬದಲಿ ಆಟಗಾರ ಸುಚೀತ್ ಹೊಡೆದ ಅದ್ಭುತ ರನ್‍ ಔಟ್‍ಗೆ ಬಲಿಯಾದರು. ನಂತರ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಜೋಸ್ ಬಟ್ಲರ್ ಕೊನೆಯಲ್ಲಿ ಸಿಕ್ಸ್ ಫೋರುಗಳ ಸುರಿಮಳೆಗೈದು ತಂಡಕ್ಕೆ ಏಳು ವಿಕೆಟ್‍ಗಳ ಜಯ ತಂದಿತ್ತರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಕ್ರಿಸ್ ಗೇಲ್ 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಸಮೇತ ಬರೋಬ್ಬರಿ 99 ರನ್ ಬಾರಿಸಿದ್ದರು. ಇವರಿಗೆ ಉತ್ತಮ ಸಾಥ್ ನೀಡಿದ್ದ ನಾಯಕ ರಾಹುಲ್ 41 ಬಾಲ್ ಗೆ 46 ರನ್ ಸಿಡಿಸಿದ್ದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 185ಗಳ ಗುರಿ ನೀಡಿದ್ದರು.

Click to comment

Leave a Reply

Your email address will not be published. Required fields are marked *