Connect with us

Districts

ಹಾಸನದಲ್ಲಿ ಮೌನಿಯಾದ ವರುಣ- ಹಾವೇರಿಯಲಿ ಉತ್ತಮ ಮಳೆ

Published

on

ಹಾಸನ: ಕಳೆದ ವರ್ಷ ಭಾರೀ ಮಳೆಯಾಗಿದ್ದ ಹಾಸನದಲ್ಲಿ ಈ ಬಾರಿ ಮಳೆರಾಯ ಮೌನಿ ಆಗಿದ್ದು, ರೈತರು ಕಂಗಾಲಾಗಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಇಲ್ಲಿವರೆಗೆ ವಾಡಿಕೆಗಿಂತ ಶೇ.20ರಷ್ಟು ಮಳೆ ಕಡಿಮೆ ಆಗಿದೆ. ಜೂನ್ 2ನೇ ವಾರದಿಂದ ಮಳೆ ಕೈಕೊಟ್ಟಿದ್ದು, ಬಿತ್ತನೆಗೂ ಹಿನ್ನಡೆ ಆಗಿದೆ. ಸರಿಯಾದ ಮಳೆಯಾಗದ ಪರಿಣಾಮ ಕೇವಲ 53 ಸಾವಿರ ಹೆಕ್ಟೇರ್ ನಲ್ಲಷ್ಟೇ ಬಿತ್ತನೆ ಆಗಿದೆ.

ಕಳೆದ ವರ್ಷ ಹೆಚ್ಚು ಮಳೆ ಸುರಿದ ಹಿನ್ನೆಲೆಯಲ್ಲಿ ತೇವಾಂಶ ಅತಿಯಾಗಿ ಕಾಫಿ, ಏಲಕ್ಕಿ, ಆಲೂಗಡ್ಡೆ ಸೇರಿದಂತೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಹಾಳಾಗಿತ್ತು. ಈ ಬಾರಿಯೂ ಮಳೆ ಅತಿಯಾಗಬಹುದು ಅನ್ನೋ ಕಾರಣಕ್ಕೆ ಆಲೂಗಡ್ಡೆ ಬದಲು ಮೆಕ್ಕೆಜೋಳ ಹಾಕಿದ್ದಾರೆ. ಆದರೆ ಈ ಬಾರಿ ಮೆಕ್ಕೆಜೋಳ ಬೆಳೆಗೂ ನೀರಿಲ್ಲದೆ ಒಣಗುತ್ತಿದೆ.

ಮಳೆ ಕೊರತೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಜೀವನದಿ ಹೇಮಾವತಿಯಲ್ಲೂ ನೀರಿಲ್ಲವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದು ನಿಶ್ಚಿತ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕಳೆದ ವಾರ ರಾಜ್ಯದ ನಾನಾ ಭಾಗಗಳಲ್ಲಿ ಉತ್ತಮ ಮಳೆ ಆಗಿತ್ತು. ಆದರೆ ಹಾವೇರಿ ಜಿಲ್ಲೆಯಲ್ಲಿ ಮಳೆರಾಯನ ಅವಕೃಪೆಯಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು. ಇಂದು ಹಾವೇರಿ ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆ ಆಗಿದೆ. ಜಿಲ್ಲೆಯ ಬ್ಯಾಡಗಿ, ಹಾನಗಲ್ ತಾಲೂಕು ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ಆಗಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದರು. ಆದರೆ ಇಂದು ಸುಮಾರು ಒಂದು ಗಂಟೆಗಳ ಧಾರಕಾರವಾಗಿ ಮಳೆ ಆದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಸಂತಸವಾಗಿದೆ.

ಕಳೆದ ದಿನ ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಸಾಧಾರಣ ಮಳೆಯಾಗಿತ್ತು. ಜಿಟಿ ಜಿಟಿ ಮಳೆಯಾಗಿದ್ದು, ವಾಹನ ಸವಾರರು ಪರದಾಡವಂತಾಗಿತ್ತು. ಇನ್ನು ಒಂದು ವಾರದಿಂದ ಕೈಕೊಟ್ಟ ಮಳೆ ಈಗ ಮತ್ತೆ ಆರಂಭವಾಗಿದ್ದರಿಂದ ಗ್ರಾಮೀಣ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.