ರಾಯಚೂರು: ವ್ಯಾಪಾರದಲ್ಲಿ ನಷ್ಟ ಮತ್ತು ಸಾಲಬಾಧೆಯಿಂದ ಒಂದಿಡೀ ಕುಟುಂಬ ದುರಂತ ಅಂತ್ಯ ಕಂಡಿರುವ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು, ಬಳಿಕ ಮನೆಯ ಯಜಮಾನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಯಚೂರಿನ ಜಲಾಲನಗರದ ರೈತ ಕಾಲೋನಿಯಲ್ಲಿ ವಿಷ್ಣು ಮಹೇಶ್ ಕುಟುಂಬ ವಾಸವಾಗಿತ್ತು. ಗಂಜ್ನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ವಿಷ್ಣು, ಹೈದರಾಬಾದ್ನಲ್ಲಿ ವ್ಯಾಪಾರವನ್ನೂ ನಡೆಸುತ್ತಿದ್ದ. ಆದರೆ, ವ್ಯಾಪಾರದಲ್ಲಿ ನಷ್ಟ ಉಂಟಾಗಿ ಸಾಲದ ಹೊರೆ ಹೆಚ್ಚಾಗಿತ್ತು.
45 ವರ್ಷದ ವಿಷ್ಣು ಮಹೇಶ್, 36 ವರ್ಷದ ಪತ್ನಿ ಅರುಣ, 10 ವರ್ಷದ ಶ್ಲೋಕ ಹಾಗೂ 7 ವರ್ಷದ ಖುಷಿ ಮೃತಪಟ್ಟಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, ರಾತ್ರಿ ತಂದಿದ್ದ ಬಿರಿಯಾನಿಯಲ್ಲಿ ಕ್ರಿಮಿನಾಶಕ ಬೆರೆಸಿ ಪತ್ನಿ ಮತ್ತು ಮಕ್ಕಳಿಗೆ ನೀಡಿರಬಹುದು ಎಂಬ ಅನುಮಾನವೂ ಇದೆ.
ರಾತ್ರಿ ಬಿರಿಯಾನಿ ಸೇವಿಸದ ಹಿರಿಯ ಮಗ ಮಾತ್ರ ಬದುಕುಳಿದಿದ್ದಾನೆ. ಮನೆಯಲ್ಲಿ ತಾಯಿ, ತಮ್ಮ ಮತ್ತು ತಂಗಿಯ ಮೃತದೇಹಗಳನ್ನು ಕಂಡು ಬಾಲಕ ಆಘಾತಕ್ಕೊಳಗಾಗಿದ್ದಾನೆ.ಇದನ್ನೂ ಓದಿ: ನವೆಂಬರ್ 5ರಿಂದ ಸಾರಿಗೆ ಬಸ್ ದರ ಏರಿಕೆ ಸಾಧ್ಯತೆ: ಬೈರತಿ ಸುರೇಶ್
ಪತ್ನಿ ಮತ್ತು ಮಕ್ಕಳ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ವಿಷ್ಣು ತನ್ನ ಆರ್ಥಿಕ ಸಂಕಷ್ಟದ ಬಗ್ಗೆ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಹೇಳಿಕೊಂಡಿದ್ದ. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಸ್ನೇಹಿತರೊಂದಿಗೆ ಮಾತನಾಡಿದ್ದ. ಈ ವೇಳೆ ಸ್ನೇಹಿತರು ಬುದ್ಧಿವಾದ ಹೇಳಿ ಸಮಾಧಾನಪಡಿಸಿದ್ದರು ಎಂದು ತಿಳಿದುಬಂದಿದೆ.
ಘಟನೆಗೂ ಮುನ್ನ ಮನೆಯಿಂದ ಹೊರಗೆ ಹೋಗುವಾಗ ಪರಿಚಯಸ್ಥರೊಬ್ಬರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ನಂತರ ರೈಲ್ವೆ ಹಳಿಯಲ್ಲಿ ವಿಷ್ಣು ಮೃತದೇಹ ಪತ್ತೆಯಾಗಿದೆ.ಇದನ್ನೂ ಓದಿ: INDIA Bloc Rally Ramlila Maidan Live – ರಾಮಲೀಲಾ ಮೈದಾನದತ್ತ ನಾಯಕರು
ಘಟನೆಗೆ ಸಂಬಂಧಿಸಿದಂತೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಹಾಗೂ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
