– ಸಂಕಷ್ಟದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಕುಟುಂಬ
ರಾಯಚೂರು: ಕೊರೊನಾ ಲಾಕ್‍ಡೌನ್ ಕೇವಲ ಸಣ್ಣಪುಟ್ಟ ಕೆಲಸಗಾರರಿಗೆ ಮಾತ್ರ ಬಿಸಿ ಮುಟ್ಟಿಸಿಲ್ಲ. ದೊಡ್ಡ ನೌಕರಿಯಲ್ಲಿದ್ದು ನಿವೃತ್ತಿಯಾದ ರಾಯಚೂರಿನ ಹಿರಿಯ ಅಧಿಕಾರಿಯನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಅಧಿಕಾರಿ ಕಷ್ಟದಲ್ಲಿದ್ದಾರೆ. ನಗರದ ಜವಾಹರನಗರದಲ್ಲಿ ವಾಸವಿರುವ ಜಯತೀರ್ಥಾಚಾರ್ಯ ವೈದ್ಯ ಕುಟುಂಬ ಲಾಕ್‍ಡೌನ್ ಹಿನ್ನೆಲೆ ಒಂದು ಹೊತ್ತಿನ ಊಟಕ್ಕೆ ಸಾಲ ಮಾಡಿಕೊಂಡು ಬದುಕುವ ಸ್ಥಿತಿಗೆ ತಲುಪಿದೆ. ಇವರ ಪರಸ್ಥಿತಿಗೆ ಲಾಕ್‍ಡೌನ್ ಒಂದು ಕಾರಣವಾದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಮಹಾಲೇಖಪಾಲಕರ ಕಚೇರಿ ಸಿಬ್ಬಂದಿ ಮುಖ್ಯ ಕಾರಣವಾಗಿದ್ದಾರೆ.
Advertisement
Advertisement
2019 ಜೂನ್ 30ಕ್ಕೆ ಜಯತೀರ್ಥಾಚಾರ್ಯರು ನಿವೃತ್ತಿಯಾಗಿದ್ದು, 9 ತಿಂಗಳು ಕಳೆದರೂ ಇದುವರೆಗೆ ನಿವೃತ್ತಿ ವೇತನ, ಪಿಂಚಣಿ ಯಾವುದೂ ಬಂದಿಲ್ಲ. ವಂಶಪಾರಂಪರಿಕ ನರದೌರ್ಬಲ್ಯ ಇರುವ ಜಯತೀರ್ಥಾಚಾರ್ಯರಿಗೆ ಈಗ ಎದ್ದು ಓಡಾಡಲು ಕೂಡ ಕಷ್ಟಪಡುತ್ತಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರ ಮಗ ಪ್ರವೀಣನಿಗೂ ವಂಶಪಾರಂಪರಿಕ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ದುಡಿಯದ ಪರಸ್ಥಿತಿಯಲ್ಲಿದ್ದಾನೆ. ನಿವೃತ್ತಿ ವೇತನವೇ ಈಗ ಕುಟುಂಬಕ್ಕೆ ಆಧಾರವಾಗಿದೆ. ಆದ್ರೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಿಂದ ಸರಿಯಾದ ದಾಖಲೆಗಳನ್ನ ಮಹಾಲೇಖಪಾಲಕರ ಕಚೇರಿಗೆ ಕಳುಹಿಸದ ಹಿನ್ನೆಲೆ ನಿವೃತ್ತಿ ವೇತನ ಬಿಡುಗಡೆಯಾಗುತ್ತಿಲ್ಲ.
Advertisement
Advertisement
ನಿವೃತ್ತಿಗೆ ಮುಂಚಿತವಾಗೇ ಮೂರು ತಿಂಗಳು ಮೊದಲು ಎಲ್ಲಾ ಸೇವಾ ದಾಖಲೆಗಳನ್ನ ಮಹಾಲೇಖಪಾಲರಿಗೆ ತಲುಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿನ ಸಿಬ್ಬಂದಿ ದಾಖಲೆಗಳನ್ನು ಸರಿಯಾಗಿ ಕಳುಹಿಸಿಲ್ಲ. ಪಿಂಚಣಿ ಮಂಜೂರಾತಿ ವಿಭಾಗಕ್ಕೆ ನಿವೃತ್ತಿಗೂ ಮುಂಚಿತವಾಗೇ ಮಾಹಿತಿ ಸಲ್ಲಿಸಬೇಕು. ಆದರೆ ಅನಗತ್ಯ ವಿಳಂಬ ಮಾಡಿ ಕಷ್ಟಕೊಡುತ್ತಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡುವ ಶಕ್ತಿಯೂ ಇವರಲ್ಲಿಲ್ಲ. ಹೀಗಾಗಿ ಲಾಕ್‍ಡೌನ್ ವೇಳೆ ಕೈ ಖಾಲಿಯಿರುವುದರಿಂದ ಮನೆ ಹತ್ತಿರದ ಕಿರಾಣಿ ಅಂಗಡಿಯಲ್ಲಿ ಸಾಲ ಮಾಡಿದ್ದಾರೆ, ಔಷಧಿ ಖರ್ಚಿಗೂ ಸಾಲ ಮಾಡಿ ಬದುಕುತ್ತಿದ್ದಾರೆ.
ಒಟ್ಟಿನಲ್ಲಿ ನಿವೃತ್ತಿ ವೇತನ ಬಂದರಷ್ಟೇ ಬದುಕು ಎನ್ನುವ ಪರಸ್ಥಿತಿಯಲ್ಲಿ ಜಯತೀರ್ಥಾಚಾರ್ಯರ ಕುಟುಂಬ ಇದೆ. ಔಷಧಿ ಖರ್ಚು, ಮನೆ ಖರ್ಚಿಗೆ ಕಷ್ಟವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು ಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡಬೇಕಿದೆ.