ಭಾರತದಲ್ಲಿ ಭತ್ತ ಬೆಳೆಯಲು ಅಪಾರ ಪ್ರಮಾಣದ ನೀರು ಬೇಕು. ಒಂದೇ ಕಿಲೋ ಅಕ್ಕಿಗೆ ಸಾವಿರಾರು ಲೀಟರ್ ನೀರು ಬಳಕೆಯಾಗುವ ಪರಿಸ್ಥಿತಿಯ ನಡುವೆ, ಕಡಿಮೆ ನೀರಿನಲ್ಲಿ ಅಕ್ಕಿ ಮತ್ತು ಕಬ್ಬು ಬೆಳೆಯಲು ‘Precision Agriculture’ ತಂತ್ರಜ್ಞಾನವನ್ನು IIT ಮದ್ರಾಸ್ ಕಂಡುಹಿಡಿದಿದೆ. Precision Agriculture ಎಂದರೇನು? ಇದರಿಂದ ಆಗೋ ಲಾಭವೇನು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಅಕ್ಕಿ ಬೆಳೆಗೆ ಎಷ್ಟು ನೀರು ಬೇಕು?
ಭಾರತದಲ್ಲಿ ಅಕ್ಕಿ ಬೆಳೆಗೆ ವಿಶೇಷ ಸ್ಥಾನವಿದೆ. ಆದರೆ ಆ ಅಕ್ಕಿ ಬೆಳೆಯಲು ಭಾರೀ ಪ್ರಮಾಣದ ನೀರು ಬೇಕಾಗುತ್ತಿದೆ ಎಂಬುದು ನಮ್ಮ ಅರಿವಿಗೆ ಬರುತ್ತಿಲ್ಲ. ಭತ್ತದ ಗದ್ದೆಯಲ್ಲಿ ನೀರು ನಿಂತಿರುವ ದೃಶ್ಯ ನಮಗೆಲ್ಲ ಸಾಮಾನ್ಯವಾಗಿ ಗೊತ್ತು. ಆದರೆ ಇದೇ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಅಪಾರ ಪ್ರಮಾಣದ ನೀರು ಬೇಕಾಗುತ್ತಿದೆ. ಒಂದು ಕೆಜಿ ಅಕ್ಕಿ ಬೆಳೆಯಲು ಭಾರತದಲ್ಲಿ ಸರಾಸರಿ 1,500ರಿಂದ 2,000 ಲೀಟರ್ ನೀರು ಬೇಕಾಗುತ್ತದೆ. ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಅಂತರ್ಜಲದ ಮೇಲಿನ ಅವಲಂಬನೆ ಹೆಚ್ಚಿರುವುದರಿಂದ 2,270ರಿಂದ 2,672 ಲೀಟರ್‌ವರೆಗೆ ತಲುಪುತ್ತದೆ.

ಈ ಪ್ರಮಾಣದ ನೀರು ಭತ್ತದ ಕೃಷಿಗೆ ಬೇಕಾಗುವುದರಿಂದ ಇದಕ್ಕೆ ಪರಿಹಾರವಾಗಿ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ತಂತ್ರಜ್ಞಾನವನ್ನು IIT ಮದ್ರಾಸ್ ಕಂಡುಹಿಡಿದಿದೆ. ಇದಕ್ಕಾಗಿ Precision Agriculture ಅಥವಾ ನಿಖರ ಕೃಷಿಯನ್ನು IIT ಮದ್ರಾಸ್ ಪರಿಚಯಿಸಿದೆ.
ಇಷ್ಟು ನೀರು ಏಕೆ ಬೇಕು?
ಭತ್ತದ ಸಾಂಪ್ರದಾಯಿಕ ಕೃಷಿಯಲ್ಲಿ ಗದ್ದೆಗಳಲ್ಲಿ ನೀರು ನಿಲ್ಲಿಸುವುದು ಸಾಮಾನ್ಯ. ನೀರಿನಿಂದ ಗದ್ದೆಯನ್ನು ತುಂಬಿಸುವುದರಿಂದ ಭತ್ತದ ಬೆಳವಣಿಗೆಗೆ ಅಗತ್ಯವಾದ ತೇವಾಂಶ ಸಿಗುತ್ತದೆ. ಜತೆಗೆ ಕಳೆಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹ ಇದು ಸಹಾಯಕವಾಗಿದೆ.
ನಿರಂತರವಾಗಿ ಗದ್ದೆಯಲ್ಲಿ ನೀರು ನಿಲ್ಲಿಸಲು ಅಪಾರ ಪ್ರಮಾಣದ ನೀರು ಬೇಕಾಗುತ್ತದೆ. ಒಂದು ಕಿಲೋ ಅಕ್ಕಿಗೆ 1,500–2,000 ಲೀಟರ್ ನೀರು ಬೇಕಾಗುತ್ತದೆ ಎಂಬ ಅಂದಾಜನ್ನು ಗಮನಿಸಿದರೆ, ದೇಶದ ಕೋಟ್ಯಂತರ ಜನರ ದೈನಂದಿನ ಅನ್ನದ ಅಗತ್ಯಕ್ಕಾಗಿ ಎಷ್ಟು ದೊಡ್ಡ ಪ್ರಮಾಣದ ನೀರು ಬಳಕೆಯಾಗುತ್ತಿದೆ ಎಂಬುದು ಅರ್ಥವಾಗುತ್ತದೆ.
ಭತ್ತ, ಕಬ್ಬು ಸೇರಿದಂತೆ ನೀರು ಹೆಚ್ಚು ಬೇಕಾಗುವ ಬೆಳೆಗಳ ಕೃಷಿ ದೇಶದ ನೀರಿನ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿದೆ. ವಿಶೇಷವಾಗಿ ಮಳೆ ಆಧಾರಿತ ಕೃಷಿಯ ಬದಲು ಅಂತರ್ಜಲ ಪಂಪ್ ಮಾಡಿ ನೀರಾವರಿ ಮಾಡುವ ಪ್ರದೇಶಗಳಲ್ಲಿ ಪರಿಸ್ಥಿತಿ ಬಹಳ ಕಷ್ವದ್ದಾಗಿದೆ. ಇದರಿಂದಾಗಿ ಇಂದು ಬೆಳೆ ಬೆಳೆಯಲು ಬಳಸುವ ನೀರು ನಾಳಿನ ಕುಡಿಯುವ ನೀರಿನ ಭದ್ರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಕಡಿಮೆ ನೀರಿನಲ್ಲಿ ಅಕ್ಕಿ, ಕಬ್ಬು ಬೆಳೆ
IIT ಮದ್ರಾಸ್‌ನ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರು ಸಂಸ್ಥೆ Precision Agriculture ಸಂಶೋಧನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಅದರ ಪ್ರಮುಖ ಉದ್ದೇಶ, ಅಗತ್ಯವಿರುವಷ್ಟು ಮಾತ್ರ ನೀರನ್ನು ಬಳಸಿಕೊಂಡು ಅಕ್ಕಿ ಮತ್ತು ಕಬ್ಬಿನಂತಹ ಬೆಳೆಗಳನ್ನು ಬೆಳೆಯುವುದು. ಅಂದರೆ, ಹೊಲಕ್ಕೆ ನೀರು ಬೇಕಾದಾಗ ಮಾತ್ರ ನೀರು ನೀಡೋದು. ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆಯಾಗದಂತೆ ತಂತ್ರಜ್ಞಾನದ ನೆರವು ಪಡೆಯೋದಾಗಿದೆ.

ಇದು ರೈತರ ನೀರಿನ ಬಳಕೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ದೇಶದಲ್ಲಿ ಕುಸಿಯುತ್ತಿರುವ ಅಂತರ್ಜಲ ಮಟ್ಟದ ಮೇಲಿನ ಒತ್ತಡವನ್ನೂ ತಗ್ಗಿಸಲಿದೆ.
Precision Agriculture ಎಂದರೇನು?
‘Precision Agriculture’ ಎಂದರೆ ಸರಳವಾಗಿ ಹೇಳುವುದಾದರೆ ನಿಖರ ಕೃಷಿ. ಬೆಳೆಗೆ ಬೇಕಾದ ನೀರು, ಗೊಬ್ಬರ ಮತ್ತು ಇತರ ಸಂಪನ್ಮೂಲಗಳನ್ನು ಅಂದಾಜಿನ ಮೇಲೆ ನೀಡುವ ಬದಲು, ತಂತ್ರಜ್ಞಾನದ ನೆರವಿನಿಂದ ಎಷ್ಟು ಬೇಕೋ ಅಷ್ಟನ್ನೇ ನಿಖರವಾಗಿ ನೀಡುವುದು ಇದರ ಉದ್ದೇಶವಾಗಿದೆ. ಇದರಲ್ಲಿ ಹಲವು ತಂತ್ರಜ್ಞಾನಗಳು ಒಟ್ಟಾಗಿ ಕೆಲಸ ಮಾಡುತ್ತವೆ.
ಮಣ್ಣಿನೊಳಗಿನ ಸೆನ್ಸರ್‌ಗಳು
ಮಣ್ಣಿನ ತೇವಾಂಶವನ್ನು ಅಳೆಯಲು ವಿಶೇಷ ಸೆನ್ಸರ್‌ಗಳನ್ನು ಬಳಸಬಹುದು. ಮಣ್ಣಿನಲ್ಲಿ ಈಗಾಗಲೇ ಸಾಕಷ್ಟು ನೀರಿದೆಯೇ ಅಥವಾ ಮತ್ತಷ್ಟು ನೀರಿನ ಅಗತ್ಯವಿದೆಯೇ ಎಂಬುದನ್ನು ಈ ಸೆನ್ಸರ್‌ಗಳು ತಿಳಿಸಬಹುದು. ಹೀಗಾಗಿ ರೈತರು ಕಣ್ಣಂದಾಜಿನಿಂದ ನೀರು ಹಾಯಿಸುವ ಬದಲು ಮಾಹಿತಿಯ ಆಧಾರದ ಮೇಲೆ ನೀರಾವರಿ ಮಾಡಬಹುದು.
ಡ್ರಿಪ್ ನೀರಾವರಿ
ನೀರನ್ನು ಹೊಲದಾದ್ಯಂತ ಹರಿಸುವ ಬದಲು ಸಸ್ಯದ ಬೇರುಗಳಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ತಲುಪಿಸುವುದು ಡ್ರಿಪ್ ನೀರಾವರಿಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ನೀರಿನ ವ್ಯರ್ಥ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ.

ಡ್ರೋನ್, ಉಪಗ್ರಹಗಳ ನೆರವು
ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಹೊಲದ ವಿವಿಧ ಭಾಗಗಳ ಸ್ಥಿತಿಯನ್ನು ಗಮನಿಸಬಹುದು. ಯಾವ ಭಾಗದಲ್ಲಿ ಬೆಳೆ ದುರ್ಬಲವಾಗಿದೆ? ಎಲ್ಲಿ ನೀರಿನ ಕೊರತೆಯಿದೆ? ಯಾವ ಪ್ರದೇಶದಲ್ಲಿ ಹೆಚ್ಚಿನ ಗಮನ ಬೇಕು? ಎಂಬುದನ್ನು ಸರಿಯಾಗಿ ಗುರುತಿಸಬಹುದು. ಇದರಿಂದ ಇಡೀ ಹೊಲಕ್ಕೆ ಒಂದೇ ರೀತಿಯಲ್ಲಿ ನೀರು ನೀಡುವ ಬದಲು, ಅಗತ್ಯವಿರುವ ಸ್ಥಳಕ್ಕೆ ಮಾತ್ರ ಅಗತ್ಯವಾದಷ್ಟು ನೀರು ನೀಡುವ ವ್ಯವಸ್ಥೆ ಸಾಧ್ಯವಾಗುತ್ತದೆ.
ಭತ್ತದ ಗದ್ದೆಯಲ್ಲಿ ನೀರು ಸದಾ ನಿಲ್ಲಬೇಕೇ?
ಭತ್ತದ ಕೃಷಿಯಲ್ಲಿ ನೀರಿನ ಬಳಕೆಯನ್ನು ಕಡಿಮೆ ಮಾಡಲು ಈಗಾಗಲೇ ಹಲವು ವಿಧಾನಗಳ ಕುರಿತು ಸಂಶೋಧನೆ ನಡೆದಿದೆ. ಅವುಗಳಲ್ಲಿ Alternate Wetting and Drying (AWD) ಪ್ರಮುಖವಾದದ್ದು. ಈ ವಿಧಾನದಲ್ಲಿ ಭತ್ತದ ಗದ್ದೆಯಲ್ಲಿ ಸದಾ ನೀರು ನಿಲ್ಲಿಸುವ ಬದಲು, ನೀರು ಹಾಯಿಸಿದ ನಂತರ ಮಣ್ಣು ಸ್ವಲ್ಪ ಒಣಗಲು ಬಿಡಲಾಗುತ್ತದೆ. ಮಣ್ಣಿನ ಸ್ಥಿತಿಯನ್ನು ಗಮನಿಸಿ ಅಗತ್ಯವಿದ್ದಾಗ ಮತ್ತೆ ನೀರು ನೀಡಲಾಗುತ್ತದೆ. ಅಂದರೆ ಗದ್ದೆಯಲ್ಲಿ ಸದಾ ನೀರಿರಬೇಕು ಎಂಬ ಪದ್ಧತಿಯಿಂದ ಬೆಳೆಗೆ ಅಗತ್ಯವಿದ್ದಾಗ ನೀರು ನೀಡಬೇಕು ಎಂಬ ಪದ್ಧತಿಯತ್ತ ಬದಲಾವಣೆಯಾಗಿದೆ.

Mission Pravartak ಪಾತ್ರವೇನು?
IIT ಮದ್ರಾಸ್‌ನ IITM Pravartak Technologies Foundation ಕೃಷಿ ತಂತ್ರಜ್ಞಾನ ಆವಿಷ್ಕಾರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನೆ ನಡೆಸುತ್ತಿದೆ. ಸೆನ್ಸರ್‌ಗಳು, ಡೇಟಾ, ನೆಟ್‌ವರ್ಕ್‌ಗಳು, ನಿಯಂತ್ರಣ ವ್ಯವಸ್ಥೆಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು Precision Agricultureಗೆ ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಲ್ಲೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಸಾಧ್ಯತೆಗಳನ್ನು IIT ಮದ್ರಾಸ್ ಪರಿಶೀಲಿಸುತ್ತಿದೆ.
ಹವಾಮಾನ ಬದಲಾವಣೆಯ ನಡುವೆ ಇದು ಏಕೆ ಮುಖ್ಯ?
ಭಾರತದಲ್ಲಿ ಅಂತರ್ಜಲ ಬಳಕೆ ಈಗಾಗಲೇ ದೊಡ್ಡ ಪ್ರಮಾಣದಲ್ಲಿದೆ. ಹಲವು ಕೃಷಿ ಪ್ರದೇಶಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಹವಾಮಾನ ಬದಲಾವಣೆಯ ಪರಿಣಾಮವೂ ಹೆಚ್ಚುತ್ತಿದೆ.
ತಾಪಮಾನ ಏರಿಕೆ, ಮಳೆಯಯಲ್ಲಿನ ಬದಲಾವಣೆ ಮತ್ತು ನೀರಿನ ಲಭ್ಯತೆಯಲ್ಲಿನ ಅನಿಶ್ಚಿತತೆ ಇವೆಲ್ಲವೂ ಕೃಷಿಯ ಭವಿಷ್ಯಕ್ಕೆ ಸವಾಲಾಗಿವೆ. ಹೀಗಾಗಿ Precision Agriculture ಶ್ರೀಮಂತ ದೇಶಗಳ ಅಥವಾ ದೊಡ್ಡ ಫಾರ್ಮ್‌ಗಳ ತಂತ್ರಜ್ಞಾನ ಮಾತ್ರವಲ್ಲ. ನೀರಿನ ಸಂಪನ್ಮೂಲ ಸೀಮಿತವಾಗಿರುವ ಭಾರತದಂತಹ ದೇಶಕ್ಕೆ ಇದು ಭವಿಷ್ಯದ ಅಗತ್ಯವಾಗಬಹುದು.
ಕಡಿಮೆ ನೀರಿನಲ್ಲಿ ಹೆಚ್ಚು ಭತ್ತ ಬೆಳೆಯುವುದು ಮುಂದಿನ ಗುರಿ?
ಭಾರತದ ಆಹಾರ ಭದ್ರತೆಯಲ್ಲಿ ಅಕ್ಕಿಗೆ ಮಹತ್ವದ ಸ್ಥಾನವಿದೆ. ಹೀಗಾಗಿ ಅಕ್ಕಿ ಬೆಳೆಯುವುದನ್ನು ಕಡಿಮೆ ಮಾಡುವುದು ಸುಲಭದ ಪರಿಹಾರವಲ್ಲ. ಪರಿಹಾರವೆಂದರೆ ಅದೇ ಬೆಳೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬೆಳೆಯುವುದು. ಕಡಿಮೆ ನೀರು, ನಿಖರವಾದ ನೀರಾವರಿ ಮತ್ತು ತಂತ್ರಜ್ಞಾನದ ನೆರವಿನಿಂದ ಹೆಚ್ಚು ಉತ್ಪಾದನೆ ಮಾಡುವುದು ಮುಂದಿನ ಗುರಿಯಾಗಿದೆ.
IIT ಮದ್ರಾಸ್‌ನ ಪ್ರಯತ್ನಗಳು ಪ್ರಯೋಗಾಲಯದಿಂದ ಕೃಷಿ ಭೂಮಿಗೆ ತಲುಪಿದರೆ ಭತ್ತ ಹಾಗೂ ನೀರನ್ನು ಹೆಚ್ಚು ಬಳಸುವ ಕೃಷಿಯಲ್ಲಿ ಹೊಸ ಬದಲಾವಣೆ ಸಾಧ್ಯವಿದೆ.


