– ಇದು ರಾಜಕೀಯ ಪ್ರೇರಿತ ಟಾರ್ಗೆಟ್
ಬೆಂಗಳೂರು ನಮ್ಮ ಸಂಸ್ಥೆಗಳ ವಾರ್ಷಿಕ ವಹಿವಾಟು 2,000 ಕೋಟಿ ರೂ.ಗೂ ಅಧಿಕವಿದೆ. ಹೀಗಿರುವಾಗ ಸಿಕ್ಕಿದೆ ಎನ್ನಲಾದ 2 ಕೋಟಿ ರೂ. ನಮಗೆ ದೊಡ್ಡ ಮೊತ್ತವೇ ಅಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi )ಹೇಳಿದ್ದಾರೆ.
ತಮ್ಮ ಹಾಗೂ ತಮ್ಮ ಕುಟುಂಬಸ್ಥರಿಗೆ ಸೇರಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ದಾಳಿಯ ಹಿಂದಿನ ರಾಜಕೀಯ ಉದ್ದೇಶಗಳ ಕುರಿತು ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ದಾಳಿ ಕುರಿತು ಸ್ಪಷ್ಟನೆ ನೀಡಿದ ಸತೀಶ್ ಜಾರಕಿಹೊಳಿ ಆ 2 ಕೋಟಿ ರೂ. ಹಣ ನಮ್ಮದೇ, ಅದನ್ನು ಕಾನೂನುಬದ್ಧವಾಗಿ ಕ್ಲೈಮ್ ಮಾಡುತ್ತೇವೆ. ಆಫ್ರಿಕಾದಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಕಂಪನಿ ಆರಂಭಿಸಲು ಯೋಜನೆ ರೂಪಿಸಿದ್ದೆವು. ಹೂಡಿಕೆ ಇನ್ನೂ ಆಗಿಲ್ಲ, ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಇದೇ ವಿದೇಶಿ ಹೂಡಿಕೆ ವಿಚಾರ ಮುಂದಿಟ್ಟುಕೊಂಡು ದಾಳಿ ನಡೆಸಲಾಗಿದೆ. ಮಗ ಮತ್ತು ಮಗಳ ಹೆಸರಿನಲ್ಲಿ ಕಂಪನಿ ಮಾಡಿರುವುದು ನಿಜ. ಈ ಸಂಬಂಧ ಆದಾಯ ತೆರಿಗೆ (IT) ಇಲಾಖೆಗೆ ಈಗಾಗಲೇ ಎಲ್ಲಾ ದಾಖಲೆ ಒದಗಿಸಿದ್ದೇವೆ. ಇಡಿ ಕೇಳಿದಾಗಲೂ ಅಗತ್ಯ ದಾಖಲೆ ನೀಡುತ್ತೇವೆ ಎಂದು ವಿವರಿಸಿದರು.
ನಾನು ಎಲ್ಲಿಯೂ ಜಾತಿ ವಿಚಾರ ತಂದು ಸಮರ್ಥಿಸಿಕೊಳ್ಳುವುದಿಲ್ಲ. ತಪ್ಪು ಮಾಡಿದರೆ ಜಾತಿಯನ್ನು ತರಲು ಸಾಧ್ಯವಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಇದನ್ನು ಸಂಪೂರ್ಣವಾಗಿ ಕಾನೂನಾತ್ಮಕವಾಗಿಯೇ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಾರಕಿಹೊಳಿಗೆ ಇಡಿ ಶಾಕ್| ಆಫ್ರಿಕಾದಲ್ಲಿ ಗಣಿಗಾರಿಕೆ ಕಂಪನಿ – ಪುತ್ರ, ಸಹೋದರಿ ನಿರ್ದೇಶಕಿ!
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಕಳೆದ 10 ವರ್ಷಗಳಿಂದ ಕೇವಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಬಿಜೆಪಿಯವರ ಮೇಲೆ ಇಂತಹ ದಾಳಿಗಳು ಏಕೆ ನಡೆಯುತ್ತಿಲ್ಲ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನೇ ಟಾರ್ಗೆಟ್ ಮಾಡಿದ ಇತಿಹಾಸವಿದೆ. ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಪ್ಲ್ಯಾನ್ ಇದಾಗಿರಬಹುದು. ಆದರೆ ನಾವು ಇ.ಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ, ನೋಟಿಸ್ ನೀಡಿದಾಗ ಕಾನೂನುಬದ್ಧ ಉತ್ತರ ಕೊಡುತ್ತೇವೆ ಎಂದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಮೊದಲೇ ಸಚಿವ ಸಂಪುಟ ಸಭೆಯಲ್ಲಿ ನಮ್ಮನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ದಾಳಿ ನಡೆದ ಬಳಿಕ ರಾತ್ರಿಯೇ ಸಿಎಂ ಭೇಟಿ ನೀಡಿ, ಕಾನೂನು ಹೋರಾಟ ನಡೆಸೋಣ ಎಂದು ಧೈರ್ಯ ತುಂಬಿದ್ದಾರೆ. ಪಕ್ಷದ ಎಲ್ಲ ನಾಯಕರು ಬೆಂಬಲಕ್ಕೆ ನಿಂತಿದ್ದಾರೆ. ಇಂದು ನಾನು ಟಾರ್ಗೆಟ್ ಆಗಿದ್ದೇನೆ, ನಾಳೆ ಬೇರೆಯವರು ಆಗಬಹುದು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಷಡ್ಯಂತ್ರದ ಹಿಂದಿರುವ ವಿರೋಧಿಗಳನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

