ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ ದಾಳಿಯ ಹಿಂದಿನ ಮಹತ್ವದ ಕಾರಣಗಳು ಹೊರಬಿದ್ದಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಆರೋಪದ ಮೇಲೆ ಈ ತನಿಖೆ ತೀವ್ರಗೊಂಡಿದೆ.
ನಿಯಮಗಳನ್ನು ಗಾಳಿಗೆ ತೂರಿ ಸತೀಶ್ ಜಾರಕಿಹೊಳಿ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸತೀಶ್ ಜಾರಕಿಹೊಳಿ ಆಫ್ರಿಕಾದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ (Iron Ore Mining) ವ್ಯವಹಾರದಲ್ಲಿ ಭಾರಿ ಮೊತ್ತದ ಹಣ ಹೂಡಿಕೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಆಫ್ರಿಕಾದಲ್ಲಿ ಅಸ್ತಿತ್ವದಲ್ಲಿರುವ ಈ ಗಣಿಗಾರಿಕೆ ಕಂಪನಿಗೆ ಪುತ್ರ ರಾಹುಲ್ ಜಾರಕಿಹೊಳಿ(Rahul jarkiholi) ನಿರ್ದೇಶಕರಾಗಿದ್ದು, ಸತೀಶ್ ಜಾರಕಿಹೊಳಿ ಅವರ ಸಹೋದರಿ ಲಕ್ಷ್ಮಿ(Lakshmi) ಕೂಡ ನಿರ್ದೇಶಕಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಕ್ಷ್ಮಿ ಅವರ ಪತಿ ಮಂಜುನಾಥ್(Manjunath) ಅಬಕಾರಿ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿದ್ದು ಇವರ ಮೇಲೆ ಈ ಹಿಂದೆ ಇಡಿ ದಾಳಿ ನಡೆಸಿತ್ತು.
ಅಕ್ರಮ ಮಾರ್ಗಗಳ ಮೂಲಕ ವಿದೇಶಕ್ಕೆ ಹಣ ವರ್ಗಾವಣೆ ಮಾಡಿ, ಕುಟುಂಬಸ್ಥರ ಹೆಸರಿನಲ್ಲಿ ವಿದೇಶಿ ಕಂಪನಿಗಳನ್ನು ಹುಟ್ಟುಹಾಕಿರುವ ಹಣಕಾಸು ಜಾಲದ ಕುರಿತು ಇಡಿ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಇಡಿ ದಾಖಲೆ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ನೀಡುವ ವಿವರದಲ್ಲಿ ಈ ಹೂಡಿಕೆಯ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.
ಏನಿದು ಫೆಮಾ?
ಫೆಮಾ (FEMA) ಎಂದರೆ Foreign Exchange Management Act, 1999 (ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ). ಇದು ಭಾರತದಲ್ಲಿ ವಿದೇಶಿ ಕರೆನ್ಸಿ ವಹಿವಾಟುಗಳು, ವಿದೇಶಿ ಹೂಡಿಕೆಗಳು ಮತ್ತು ಗಡಿಯಾಚೆಗಿನ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಅತ್ಯಂತ ಪ್ರಮುಖವಾದ ಕಾನೂನಾಗಿದೆ.
ಬ್ಯಾಂಕುಗಳು ನೀಡುವ ಸಂಶಯಾಸ್ಪದ ವಿದೇಶಿ ವಹಿವಾಟುಗಳ ವರದಿ, ಅಕ್ರಮ ಹವಾಲಾ ದಂಧೆಯ ಸುಳಿವು, ಅಥವಾ ವಿದೇಶಿ ನೇರ ಹೂಡಿಕೆಯಲ್ಲಿ (FDI) ನಿಯಮ ಉಲ್ಲಂಘನೆಯ ದೂರುಗಳು ಬಂದಾಗ ಇಡಿ ಸ್ವತಃ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತದೆ. ಫೆಮಾ ಒಂದು ಸಿವಿಲ್ ಕಾನೂನು (Civil Law) ಆಗಿದೆಯೇ ಹೊರತು ಕ್ರಿಮಿನಲ್ ಕಾನೂನಲ್ಲ. ಇದನ್ನೂ ಓದಿ: 178 ಕೋಟಿ ಅಬಕಾರಿ ಅಕ್ರಮ – ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿಗೆ ಕಾರಣ ಏನು?
ಫೆಮಾ ದಾಳಿ ಅಥವಾ ತನಿಖೆಯ ಸಮಯದಲ್ಲಿ ಸಿಕ್ಕ ಹಣ ಕೇವಲ ವಿದೇಶಿ ವಿನಿಮಯ ಉಲ್ಲಂಘನೆಯಲ್ಲ, ಬದಲಿಗೆ ಅದು ಭ್ರಷ್ಟಾಚಾರ, ವಂಚನೆ, ಡ್ರಗ್ಸ್ ಅಥವಾ ದೇಶದ್ರೋಹದ ಚಟುವಟಿಕೆಗಳ ಮೂಲಕ ಗಳಿಸಿದ ಕಪ್ಪು ಹಣ ಎಂದು ಇಡಿಗೆ ಪುರಾವೆ ಸಿಕ್ಕರೆ ಇಡಿ ತಕ್ಷಣವೇ ಆ ಪ್ರಕರಣದ ಮೇಲೆ PMLA (Prevention of Money Laundering Act) ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸುತ್ತದೆ. PMLA ಅಡಿಯಲ್ಲಿ ಇಡಿಗೆ ವಾರಂಟ್ ಇಲ್ಲದೆಯೇ ಆರೋಪಿಯನ್ನು ತಕ್ಷಣವೇ ಬಂಧಿಸುವ ಸಂಪೂರ್ಣ ಅಧಿಕಾರವಿದೆ.
