-ಹೊಟ್ಟೆಯಲ್ಲಿ ಎರಡು ವೃಷಣಗಳು ಪತ್ತೆ
ನವದೆಹಲಿ: ಮಕ್ಕಳಾಗದ್ದಕ್ಕೆ ಟೆಸ್ಟ್ ಮಾಡಿಸಲು ಹೋಗಿದ್ದ 24 ವರ್ಷದ ಯುವಕನ ದೇಹದಲ್ಲಿ ಸಂಪೂರ್ಣವಾಗಿ ಬೆಳೆದ ಹಾಗೂ ಆರೋಗ್ಯಕರ ಗರ್ಭಕೋಶ (Uterus) ಪತ್ತೆಯಾಗಿದೆ.
ಹೌದು, ದೆಹಲಿಯ (Delhi) ಆಸ್ಪತ್ರೆಯೊಂದರಲ್ಲಿ ಈ ಅಚ್ಚರಿಯ ಕಾಯಿಲೆ ಬೆಳಕಿಗೆ ಬಂದಿದೆ. ಯುವಕನ ದೇಹದಲ್ಲಿ ಗರ್ಭಕೋಶ ಹಾಗೂ ಹೊಟ್ಟೆಯಲ್ಲಿ ಎರಡು ವೃಷಣಗಳು (testes) ಪತ್ತೆಯಾಗಿವೆ. ಇದನ್ನೂ ಓದಿ: ಹೌತಿಗಳ ಮೇಲೆ ಏರ್ಸ್ಟ್ರೈಕ್ ಮಾಡಿ – MBS ಕರೆಯನ್ನು 2 ಬಾರಿ ತಿರಸ್ಕರಿಸಿದ ಟ್ರಂಪ್
ಯುವಕ ನೋಡಲು ಸಾಮಾನ್ಯ ಪುರುಷರಂತ ದೈಹಿಕ ಲಕ್ಷಣಗಳು ಹೊಂದಿದ್ದು, ಯಾವುದೇ ರೀತಿಯ ರೋಗದ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೆ ತಪಾಸಣೆ ನಡೆಸಿದಾಗ ವೃಷಣಕೋಶದಲ್ಲಿ ಎರಡು ವೃಷಣಗಳಿಲ್ಲ ಹಾಗೂ ವೀರ್ಯ ಪರೀಕ್ಷೆ ನಡೆಸಿದಾಗ ಯಾವುದೇ ವೀರ್ಯಾಣುಗಳು ಇರಲಿಲ್ಲ, ಹೀಗಾಗಿ ವೈದ್ಯರು ಕ್ರೋಮೋಸೋಮ್ ಪರೀಕ್ಷೆ, ಹಾರ್ಮೋನ್ ಪರೀಕ್ಷೆ ಮತ್ತು ಸ್ಕ್ಯಾನಿಂಗ್ಗೆ ಸೂಚಿಸಿದರು.
ಸ್ಕ್ಯಾನಿಂಗ್ನಲ್ಲಿ ಗರ್ಭಕೋಶ ಪತ್ತೆ
ಕ್ರೋಮೋಸೋಮ್ ಪರೀಕ್ಷೆ ನಡೆಸಿದಾಗ ಯುವಕ ಸಾಮಾನ್ಯ XY ಪುರುಷ ಕ್ರೋಮೋಸೋಮ್ ಹೊಂದಿರುವುದು ದೃಢಪಟ್ಟಿದೆ. ಆದರೆ ಅಲ್ಟ್ರಾಸೌಂಡ್ ಮತ್ತು MRI ಸ್ಕ್ಯಾನ್ ನಡೆಸಿದಾಗ ದೇಹದಲ್ಲಿ ಸಂಪೂರ್ಣವಾಗಿ ಬೆಳೆದ ಗರ್ಭಕೋಶ ಇರುವುದು ಪತ್ತೆಯಾಗಿದೆ. ಜೊತೆಗೆ, ಎರಡೂ ವೃಷಣಗಳು ದೇಹದ ಒಳಭಾಗದಲ್ಲೇ ಇದ್ದು, ಅವು ಹೆಣ್ಣಿನ ಅಂಡಾಶಯಗಳಂತೆ ಕಾಣುತ್ತಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ – ಮೂವರು ಮಕ್ಕಳು ಸೇರಿ 8 ಮಂದಿ ದುರ್ಮರಣ
ಪುರುಷ ಸಂತಾನೋತ್ಪತ್ತಿ ಆರೋಗ್ಯ ತಜ್ಞರ ಪ್ರಕಾರ, ಇದು `ಪರ್ಸಿಸ್ಟೆಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್’ (Persistent Mllerian Duct Syndrome) ಎಂಬ ಅಪರೂಪದ ಸ್ಥಿತಿಯಿಂದ ಉಂಟಾಗುತ್ತದೆ. ಸಾಮಾನ್ಯ ಪುರುಷ ಬಾಹ್ಯ ಜನನಾಂಗಗಳನ್ನು ಹೊಂದಿದ್ದರೂ ಪುರುಷನ ದೇಹದೊಳಗೆ ಗರ್ಭಕೋಶ ಇರುವುದೇ ಈ ಸಿಂಡ್ರೋಮ್. ಇದು ಲೈಂಗಿಕ ಬೆಳವಣಿಗೆಯ ಒಂದು ಅಪರೂಪದ ಅಸ್ವಸ್ಥತೆಯಾಗಿದ್ದು, ಪುರುಷ ಕ್ರೋಮೋಸೋಮ್ ಮತ್ತು ಬಾಹ್ಯ ಪುರುಷ ಜನನಾಂಗಗಳನ್ನು ಹೊಂದಿರುವ ವ್ಯಕ್ತಿಯಲ್ಲಿ ಗರ್ಭಕೋಶ ಮತ್ತು ಕೆಲವೊಮ್ಮೆ ಫಾಲೋಪಿಯನ್ ಟ್ಯೂಬ್ಗಳಂತಹ ರಚನೆಗಳು ಉಳಿದುಕೊಳ್ಳುತ್ತವೆ.
ಗರ್ಭದಲ್ಲಿ ಗಂಡು ಭ್ರೂಣ ಬೆಳೆಯುವಾಗ, ಅದರ ವೃಷಣಗಳು `AMH’ (ಆಂಟಿ ಮುಲ್ಲೇರಿಯನ್ ಹಾರ್ಮೋನ್) ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತವೆ. ಈ ಹಾರ್ಮೋನ್ನ ಕೆಲಸವೇ ಹೆಣ್ಣಿನ ಅಂಗಗಳನ್ನು ಕರಗಿಸಿ ಇಲ್ಲದಂತೆ ಮಾಡುವುದು. ಆದರೆ ಮಗುವಿನ ದೇಹದಲ್ಲಿ ಈ `AHM’ ಹಾರ್ಮೋನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗಿರುವುದಿಲ್ಲ ಅಥವಾ ದೇಹವು ಆ ಹಾರ್ಮೋನ್ಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಈ ಸಮಯದಲ್ಲಿ ಕರಗಿ ಹೋಗಬೇಕಿದ್ದ ಹೆಣ್ಣಿನ ಅಂಗಗಳು ಕರಗದೇ ಹೊಟ್ಟೆಯಲ್ಲೇ ಗರ್ಭಕೋಶವಾಗಿ ಬೆಳೆದು ಉಳಿದುಬಿಡುತ್ತವೆ.ಇದನ್ನೂ ಓದಿ: ಜಾಮೀನಿಗಾಗಿ ಕೋರ್ಟ್ಗೆ ನಕಲಿ ಆಧಾರ್ ಕಾರ್ಡ್ ಸಲ್ಲಿಕೆ – ಇಬ್ಬರು ಆರೋಪಿಗಳ ಬಂಧನ
ಇದಕ್ಕೆ ಕಾರಣವೇನು?
ವೃಷಣಗಳು ದೇಹದ ಒಳಭಾಗದಲ್ಲಿಯೇ ಉಳಿದುಕೊಂಡಾಗ ಅದು ಸಂತಾನೋತ್ಪತ್ತಿಯ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ವೀರ್ಯಾಣು ಉತ್ಪತ್ತಿಯಾಗಲು ದೇಹದ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ ತಾಪಮಾನ ಬೇಕಾಗುತ್ತದೆ. ವೃಷಣಗಳು ಹೊಟ್ಟೆಯೊಳಗೆ ಉಳಿದುಹೋದಾಗ, ದೇಹದ ಶಾಖದಿಂದಾಗಿ ವೀರ್ಯಾಣು ಉತ್ಪಾದನೆ ಕುಂಠಿತಗೊಳ್ಳುತ್ತದೆ ಅಥವಾ ನಿಂತುಹೋಗುತ್ತದೆ. ವೃಷಣಗಳು ಇರಬೇಕಾದ ಜಾಗದಲ್ಲಿ ಇರದೆ ಹೊಟ್ಟೆಯಲ್ಲಿ ಇದ್ದರೆ ಅವುಗಳ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ವೀರ್ಯ ಹೊರಬರುವ ದಾರಿಯಲ್ಲಿ ಅಡಚಣೆ ಇರಬಹುದು ಅಥವಾ ವೀರ್ಯಾಣು ಉತ್ಪತ್ತಿಗೆ ಬೇಕಾದ ಹಾರ್ಮೋನ್ಗಳಲ್ಲಿ ಏರುಪೇರಾಗಬಹುದು.
ಒಂದು ವೇಳೆ ವೃಷಣಗಳು ಸರಿಯಾದ ಗಾತ್ರದಲ್ಲಿದ್ದು, ವೀರ್ಯಾಣುಗಳು ಉತ್ಪತ್ತಿಯಾಗುತ್ತಿದ್ದರೆ ನೈಸರ್ಗಿಕವಾಗಿಯೇ ಮಗು ಪಡೆಯಲು ಸಾಧ್ಯವಿದೆ. ಒಂದು ವೇಳೆ ವೀರ್ಯಾಣುಗಳ ಕೊರತೆ ಇದ್ದರೆ, ವೈದ್ಯರು ನೇರವಾಗಿ ವೃಷಣದಿಂದಲೇ ವೀರ್ಯಾಣುಗಳನ್ನು ಹೊರತೆಗೆದು IVF ಅಥವಾ ICSI ತಂತ್ರಜ್ಞಾನದ ಮೂಲಕ ಮಕ್ಕಳಾಗುವಂತೆ ಚಿಕಿತ್ಸೆ ನೀಡಬಹುದು.ಇದನ್ನೂ ಓದಿ: ಗಣೇಶ ಚತುರ್ಥಿ ಹೊಸ್ತಿಲಲ್ಲೇ ಶಾಕ್ – RTO ಎಚ್ಚರಿಕೆ ಮಧ್ಯೆ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ
ಶಸ್ತ್ರಚಿಕಿತ್ಸೆಯ ಮೂಲಕ ಅಂಗಗಳನ್ನು ತೆರವು:
ಸದ್ಯ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯ ದೇಹದಲ್ಲಿದ್ದ ಗರ್ಭಕೋಶ ಮತ್ತು ಎರಡೂ ವೃಷಣಗಳನ್ನು ತೆಗೆದುಹಾಕಲಾಗಿದೆ. ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇರುವುದರಿಂದ ಅವುಗಳನ್ನು ತೆಗೆಯುವುದು ಅನಿವಾರ್ಯವಾಗಿತ್ತು. ತೆಗೆದ ಅಂಗಾಂಶಗಳನ್ನು ಬಯಾಪ್ಸಿಗೆ ಕಳುಹಿಸಲಾಗಿದ್ದು, ಅದರಲ್ಲಿ ಅತ್ಯಂತ ಕನಿಷ್ಠ ಮಟ್ಟದ ಕ್ಯಾನ್ಸರ್ ಲಕ್ಷಣಗಳು ಕಂಡುಬಂದಿವೆ. ಹೊಟ್ಟೆಯೊಳಗೆ ಉಳಿದುಕೊಂಡಿದ್ದ ವೃಷಣಗಳನ್ನು ಹಾಗೆಯೇ ಬಿಟ್ಟಿದ್ದರೆ ಭವಿಷ್ಯದಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯಕೀಯ ಇತಿಹಾಸದಲ್ಲಿ ಈವರೆಗೆ ಕೆಲವೇ ಅಂದರೆ 100 PMDS ಪ್ರಕರಣಗಳು ದಾಖಲಾಗಿವೆ. ಪುರುಷನಾಗಿ ಬೆಳೆದ ವ್ಯಕ್ತಿಯಲ್ಲಿ ಗರ್ಭಕೋಶ ಕಂಡುಬರುವುದನ್ನು ಕೇವಲ ವಿಚಿತ್ರ ಘಟನೆಯಾಗಿ ನೋಡಬಾರದು. ಇಂತಹ ಸಂದರ್ಭಗಳಲ್ಲಿ ಆಂಡ್ರಾಲಜಿ, ಸಂತಾನೋತ್ಪತ್ತಿ ಎಂಡೋಕ್ರೈನಾಲಜಿ ಮತ್ತು ಜೆನೆಟಿಕ್ಸ್ ತಜ್ಞರಿಂದ ಕೂಲಂಕಷ ತಪಾಸಣೆ ಅಗತ್ಯವಿದೆ. ವೀರ್ಯಾಣು ಕೊರತೆ, ದೇಹದೊಳಗೆ ಉಳಿದ ವೃಷಣಗಳು ಅಥವಾ ಕಾರಣ ತಿಳಿಯದ ಬಂಜೆತನದ ಸಮಸ್ಯೆ ಇರುವ ರೋಗಿಗಳು ಇಂತಹ ಬೆಳವಣಿಗೆಯ ಅಥವಾ ಅಂಗರಚನಾ ಅಸಹಜತೆಗಳನ್ನು ಪತ್ತೆಹಚ್ಚಲು ಸ್ಕ್ಯಾನಿಂಗ್, ಹಾರ್ಮೋನ್ ಮತ್ತು ಜೆನೆಟಿಕ್ ಪರೀಕ್ಷೆಗಳು ಅತ್ಯಂತ ಪ್ರಮುಖವಾಗಿವೆ ಎಂಬುದನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ.ಇದನ್ನೂ ಓದಿ: ಬಣ್ಣದ ಲೋಕಕ್ಕೆ ಮರಳಿದ ಎಸ್.ನಾರಾಯಣ್ ಪುತ್ರ ಪಂಕಜ್ – ಸರ್ಚ್ ಚಿತ್ರಕ್ಕೆ ಮುಹೂರ್ತ

