* ಮೂರು ದಿನ ಏನೆಲ್ಲಾ ಕಾರ್ಯಕ್ರಮಗಳು?
ನವದೆಹಲಿ: 18ನೇ ಬ್ರಿಕ್ಸ್ ಶೃಂಗಸಭೆಗೆ (BRICS Summit 2026) ದೆಹಲಿ (Delhi) ಸನ್ನದ್ಧವಾಗಿದೆ. ನಾಳೆಯಿಂದ ಎರಡು ದಿನಗಳ ಕಾಲ ಸಭೆ ನಡೆಯಲಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಭಾರಿ ಭದ್ರತೆ ನಿಯೋಜಿಸಲಾಗಿದ್ದು, ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ನಾಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದೆಹಲಿ ತಲುಪಲಿದ್ದಾರೆ.
ಜಾಗತಿಕ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಉದಯೋನ್ಮುಖ ರಾಷ್ಟ್ರಗಳ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 18ನೇ ಬ್ರಿಕ್ಸ್ ಶೃಂಗಸಭೆ ನವದೆಹಲಿಯಲ್ಲಿ ನಡೆಯುತ್ತಿದೆ. ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿರುವ ಶೃಂಗಸಭೆಗೆ ಭಾರತ ಆತಿಥ್ಯ ವಹಿಸಿದ್ದು, ವಿವಿಧ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ರಾಷ್ಟ್ರಾಧ್ಯಕ್ಷರು, ಸರ್ಕಾರದ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನವದೆಹಲಿಯ ಭಾರತ ಮಂಟಪಂ ಶೃಂಗಸಭೆಯ ಪ್ರಮುಖ ವೇದಿಕೆಯಾಗಿದೆ. ಇದನ್ನೂ ಓದಿ: BRICS Summit: ದೆಹಲಿಗೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್
ಬ್ರಿಕ್ಸ್ ವೇದಿಕೆಯ ಮೂಲಕ ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ, ವ್ಯಾಪಾರ, ಹೂಡಿಕೆ, ಹಣಕಾಸು ವ್ಯವಸ್ಥೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಜಾಗತಿಕ ಆಡಳಿತ ಸುಧಾರಣೆ ಕುರಿತು ಚರ್ಚೆ ನಡೆಯಲಿದೆ. ಜಾಗತಿಕ ರಾಜಕೀಯದಲ್ಲಿ ಬಹುಧ್ರುವೀಯ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಕೂಡ ಪ್ರಮುಖ ಚರ್ಚೆಯ ವಿಷಯವಾಗಿದೆ. ಪ್ರಸ್ತುತ ಪಶ್ಚಿಮ ಏಷ್ಯಾ ಸಂಘರ್ಷ, ಉಕ್ರೇನ್ ಯುದ್ಧ, ಜಾಗತಿಕ ವ್ಯಾಪಾರ ಮತ್ತು ಇಂಧನದ ಅಸ್ಥಿರತೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸವಾಲುಗಳ ನಡುವೆಯೇ ಈ ಶೃಂಗಸಭೆ ನಡೆಯುತ್ತಿರುವುದರಿಂದ ಮಹತ್ವ ಪಡೆದಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಸೇರಿದಂತೆ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬ್ರಿಕ್ಸ್ ವಿಸ್ತರಣೆಯ ನಂತರ ಸದಸ್ಯ ರಾಷ್ಟ್ರಗಳ ಸಂಖ್ಯೆ 11ಕ್ಕೆ ಏರಿದ್ದು, ಹೊಸ ಸದಸ್ಯ ರಾಷ್ಟ್ರಗಳೂ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಯುಎಇ ಪರವಾಗಿ ಕ್ರೌನ್ ಪ್ರಿನ್ಸ್ ಶೇಖ್ ಖಾಲೆದ್ ಪ್ರತಿನಿಧಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಲಿದ್ದು, ಚೀನಾ ಮತ್ತು ರಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧಗಳು, ಪ್ರಾದೇಶಿಕ ಭದ್ರತೆ ಹಾಗೂ ಆರ್ಥಿಕ ಸಹಕಾರ ಕುರಿತು ಚರ್ಚೆಗೆ ಹೆಚ್ಚಿನ ಮಹತ್ವ ಸಿಕ್ಕಿದೆ.
ಮೂರು ದಿನ ಏನೆಲ್ಲಾ ಕಾರ್ಯಕ್ರಮಗಳು?
ಸೆಪ್ಟೆಂಬರ್ 11
* ಬ್ರಿಕ್ಸ್ ವ್ಯಾಪಾರ ವೇದಿಕೆ ಪ್ರಮುಖ ಕಾರ್ಯಕ್ರಮ
* ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವ್ಯಾಪಾರ ವೇದಿಕೆಯ ಪೂರ್ಣ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ
* ಪ್ರಧಾನಿ ನರೇಂದ್ರ ಮೋದಿ–ಪುಟಿನ್ ದ್ವಿಪಕ್ಷೀಯ ಮಾತುಕತೆ ನಿರೀಕ್ಷೆ
* ಮೋದಿ ಜೊತೆ ಪುಟಿನ್ ಅವರು INNOPROM ಪ್ರದರ್ಶನಕ್ಕೆ ಭೇಟಿ ನೀಡುವ ಸಾಧ್ಯತೆ
ಸೆಪ್ಟೆಂಬರ್ 12
* ಮಧ್ಯಾಹ್ನ 2:35: ಬ್ರಿಕ್ಸ್ ನಾಯಕರ ಶೃಂಗಸಭೆ ಆರಂಭ
* 2:35: ಅಂತರ್ಗತ ಜಾಗತಿಕ ಆಡಳಿತ ಹಾಗೂ ಬಹುಪಕ್ಷೀಯತೆಯನ್ನು ಬಲಪಡಿಸುವ ಕುರಿತು ಮುಚ್ಚಿದ ಬಾಗಿಲಿನ ಅಧಿವೇಶನ
* ಸಂಜೆ 4:25: ಭಾರತ್ ಇನ್ನೋವೇಟ್ಸ್ ಪ್ರದರ್ಶನ
* ಸಂಜೆ 5:05: ಬ್ರಿಕ್ಸ್ ನಾಯಕರ ಗ್ರೂಪ್ ಫೋಟೊ ಮತ್ತು ಸಸಿ ನೆಡುವ ಕಾರ್ಯಕ್ರಮ
* ಸಂಜೆ 7:30: ಪ್ರಧಾನಿ ಮೋದಿ ಅವರಿಂದ ಬ್ರಿಕ್ಸ್ ನಾಯಕರಿಗೆ ಔತಣಕೂಟ
ಸೆಪ್ಟೆಂಬರ್ 13
* ಬೆಳಿಗ್ಗೆ 9:55: ಬ್ರಿಕ್ಸ್ ನಾಯಕರ ಆಗಮನ
* ಬೆಳಿಗ್ಗೆ 10:35: ನಾಯಕರ ಅಧಿಕೃತ ಗ್ರೂಪ್ ಫೋಟೊ
* ಬೆಳಿಗ್ಗೆ 10:50: ಶೃಂಗಸಭೆಯ ಉದ್ಘಾಟನಾ ಅಧಿವೇಶನ
* ಚರ್ಚೆಯ ಪ್ರಮುಖ ವಿಷಯಗಳು: ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ
* ಶೃಂಗಸಭೆಯ ಅಂತ್ಯ: ನವದೆಹಲಿ ನಿರ್ಣಯಗಳ ಅಂಗೀಕಾರದೊಂದಿಗೆ ಶೃಂಗಸಭೆ ಮುಕ್ತಾಯಗೊಳ್ಳುವ ನಿರೀಕ್ಷೆ
ದೆಹಲಿ ಅಭೇದ್ಯ ಭದ್ರತಾ ಕೋಟೆ
ವಿದೇಶಿ ರಾಷ್ಟ್ರಗಳ ಅತ್ಯುನ್ನತ ನಾಯಕರ ಆಗಮನ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಹುಹಂತದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಭಾರತ ಮಂಟಪಂ ಹಾಗೂ ಪ್ರಮುಖ ವಿಐಪಿ ಮಾರ್ಗಗಳ ಸುತ್ತ ಸುಮಾರು 5 ಕಿಮೀ ವ್ಯಾಪ್ತಿಯಲ್ಲಿ ಬಹುಪದರದ ಭದ್ರತಾ ವಲಯ ನಿರ್ಮಿಸಲಾಗಿದೆ. ಸುಮಾರು 7,000 ಭದ್ರತಾ ಸಿಬ್ಬಂದಿ ಹಾಗೂ 4,800 ಸಂಚಾರ ಪೊಲೀಸರು ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ.

ಇದರ ಜೊತೆಗೆ ನಗರಾದ್ಯಂತ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು, ತಾಂತ್ರಿಕ ಕಣ್ಗಾವಲು, ಆಕಾಶ ನಿಗಾ ಮತ್ತು ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಬಳಸಲಾಗುತ್ತಿದೆ. ಭಾರತ ಮಂಟಪಂ ಮಾತ್ರವಲ್ಲದೆ ವಿದೇಶಿ ನಾಯಕರು ತಂಗುವ ಹೋಟೆಲ್‌ಗಳು, ವಿಮಾನ ನಿಲ್ದಾಣದಿಂದ ಹೋಟೆಲ್‌ಗಳಿಗೆ ತೆರಳುವ ಮಾರ್ಗಗಳು ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೂ ನಿಗಾ ಇರಿಸಲಾಗಿದೆ. ಇದನ್ನೂ ಓದಿ: ಬ್ರಿಕ್ಸ್‌ಗೆ ಅಬೇಧ್ಯ ಕೋಟೆಯಾದ ದೆಹಲಿ – 7,000 ಭದ್ರತಾ ಸಿಬ್ಬಂದಿ, 4,800 ಸಂಚಾರ ಪೊಲೀಸರ ನಿಯೋಜನೆ!
ಎನ್‌ಎಸ್‌ಜಿ ಕಮಾಂಡೋಗಳು, ವಿಶೇಷ ಭದ್ರತಾ ಪಡೆಗಳು ಹಾಗೂ ಆ್ಯಂಟಿ-ಡ್ರೋನ್ ವ್ಯವಸ್ಥೆ ಕೂಡ ಭದ್ರತಾ ಕಾರ್ಯಾಚರಣೆಯ ಭಾಗವಾಗಿವೆ. ವಿದೇಶಿ ನಾಯಕರ ಭದ್ರತಾ ತಂಡಗಳೂ ಈಗಾಗಲೇ ದೆಹಲಿಗೆ ಆಗಮಿಸಿದ್ದು, ಹೋಟೆಲ್‌ಗಳ ಸಿಬ್ಬಂದಿಯ ಹಿನ್ನೆಲೆಯನ್ನೂ ಪರಿಶೀಲಿಸಲಾಗಿದೆ.
35ಕ್ಕೂ ಹೆಚ್ಚು ಪ್ರಮುಖ ರಸ್ತೆಗಳ ಮೇಲೆ ನಿಯಂತ್ರಣ
ವಿಐಪಿ ವಾಹನಗಳ ಸಂಚಾರ ಸುಗಮಗೊಳಿಸಲು ದೆಹಲಿಯ 35ಕ್ಕೂ ಹೆಚ್ಚು ಪ್ರಮುಖ ರಸ್ತೆಗಳ ಮೇಲೆ ನಿಯಂತ್ರಣ ಹಾಗೂ 22 ಪ್ರಮುಖ ಮಾರ್ಗಗಳಲ್ಲಿ ಡೈವರ್ಷನ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಗಳಿಗೆ ಕ್ವಿಕ್ ರೆಸ್ಪಾನ್ಸ್ ತಂಡಗಳು, ಅಂಬುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಭದ್ರತಾ ವ್ಯವಸ್ಥೆಗೆ ದೆಹಲಿ ಮಾತ್ರವಲ್ಲದೆ ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಚಂಡೀಗಢದ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ. ಗಡಿ ತಪಾಸಣೆ, ಗುಪ್ತಚರ ಮಾಹಿತಿ ಹಂಚಿಕೆ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಮೇಲ್ವಿಚಾರಣೆಯನ್ನೂ ಹೆಚ್ಚಿಸಲಾಗಿದೆ.
ಇಂದು ಸಂಜೆ ವೇಳೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಮೋದಿ ದ್ವಿ ಪಕ್ಷೀಯ ಮಾತುಕತೆ ನಡೆಯಲಿದ್ದು, ರಕ್ಷಣೆಗೆ ಸಂಬಂಧಿಸಿದ ಹಲವು ಒಪ್ಪಂದಗಳು ಅಂತಿಮಗೊಳ್ಳಲಿದೆ, ನಾಳೆ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಜೊತೆಗೂ ದ್ವೀ ಪಕ್ಷಿಯ ಮಾತುಕತೆ ನಡೆಯಲಿದ್ದು ಗಾಲ್ವಾನ್ ಸಂಘರ್ಷದ ಬಳಿಕ ನಡೆಯುತ್ತಿರುವ ಮೊದಲ ಸಭೆಯಾಗಿದ್ದು ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ.

