ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯ ಪರಿಣಾಮ ಇದೀಗ ಕೃಷಿಯಷ್ಟೇ ಅಲ್ಲ, ಜಲವಿದ್ಯುತ್ (Hydropower) ಉತ್ಪಾದನೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
ಮಳೆ ಕೊರತೆಯಿಂದಾಗಿ (Rain Shortage) ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ ಎಂಬ ಹೆಗ್ಗಳಿಕೆ ಹೊಂದಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಜಲವಿದ್ಯುತ್ ಕೇಂದ್ರದಲ್ಲಿ (Shivanasamudra Power Plant) ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ.

ಕಾವೇರಿ ನದಿಯಲ್ಲಿ (Kaveri River) ಸಮರ್ಪಕ ಪ್ರಮಾಣದ ನೀರಿನ ಹರಿವು ಇಲ್ಲದ ಕಾರಣ ಕಳೆದ ಸುಮಾರು ಒಂದೂವರೆ ತಿಂಗಳಿಂದ ಜಲವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಹಲವು ವರ್ಷಗಳ ಬಳಿಕ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಒಂದೂವರೆ ತಿಂಗಳಿಂದ ಉತ್ಪಾದನೆ ಬಂದ್
ಕೆಆರ್‌ಎಸ್ ಅಥವಾ ಕಬಿನಿ ಜಲಾಶಯದಿಂದ ನೀರು ಬಿಟ್ಟರೆ ಮಾತ್ರವೇ ವಿದ್ಯುತ್ ಉತ್ಪಾದನೆ ಕೆಲಸ ನಡೆಯುತ್ತದೆ. ನಿತ್ಯ 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಅದಕ್ಕಾಗಿ ನಿತ್ಯ 1,450 ಕ್ಯೂಸೆಕ್ ನೀರಿನ ಅಗತ್ಯ ಇತ್ತು. ಆದ್ರೆ ಈ ಬಾರಿ ಮಳೆ ಕೊರತೆ ಆಗಿದ್ದು, ಕಾವೇರಿ ನದಿ ಬರಿದಾಗಿರೋದ್ರಿಂದ ಜಲ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ.
