* ಮೋದಿ ಜೊತೆ ಘಟನೆಯ ವಿವರ ಹಂಚಿಕೊಂಡ ಪೈಲಟ್
* 180 ಪ್ರಯಾಣಿಕರ ಜೀವ ಉಳಿಸಿದ ಪೈಲಟ್ ಧೈರ್ಯಕ್ಕೆ ಪ್ರಧಾನಿ ಮೆಚ್ಚುಗೆ
ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ (flydubai) ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ 180 ಜನರ ಪ್ರಾಣ ಉಳಿಸಿದ ಭಾರತದ ಧೈರ್ಯಶಾಲಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಮಾತನಾಡಿದರು.
ಕ್ಯಾಪ್ಟನ್ ಮಚ್ಚಾರ್ (Smit Machchhar) ವಿಮಾನದಲ್ಲಿ ತಮಗಾದ ಅನುಭವದ ವಿವರಗಳನ್ನು ಪ್ರಧಾನಿ ಮೋದಿ ಜೊತೆ ಹಂಚಿಕೊಂಡರು. ಆ ಘಟನೆಯ ಸಮಯದಲ್ಲಿ ತಮಗೆ ಧೈರ್ಯ ನೀಡಿದ ಅಂಶಗಳ ಬಗ್ಗೆಯೂ ಮಾತನಾಡಿದರು. ಪ್ರಧಾನ ಮಂತ್ರಿಯವರು ಅವರ ಧೈರ್ಯವನ್ನು ಶ್ಲಾಘಿಸಿದರು. ಪೈಲಟ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಇದನ್ನೂ ಓದಿ: ‘ನನ್ನನ್ನು ಕೊಂದುಬಿಡಿ..’: ಸಹ-ಪೈಲಟ್ ಇಸ್ಲಾಮಿಸ್ಟ್ ಉಗ್ರಗಾಮಿ ಸಿದ್ಧಾಂತ ಪ್ರಭಾವಕ್ಕೆ ಒಳಗಾಗಿದ್ದ ಎಂದ ನೆತನ್ಯಾಹು
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಯುಎಇಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ತಿಳಿಸಿದ್ದಾರೆ. ಇಲ್ಲಿನ ಆಸ್ಪತ್ರೆಯಲ್ಲಿ ಗಾಯಗೊಂಡ ಪೈಲಟ್ ಮತ್ತು ಅವರ ಕುಟುಂಬವನ್ನು ಭೇಟಿಯಾದ ದೀಪಕ್ ಮಿತ್ತಲ್, ಸ್ಮಿತ್ ಮಚ್ಚಾರ್ ಅವರ ಮನೋಬಲವು ಉತ್ತಮವಾಗಿದೆ. ಅವರು ಹರ್ಷಚಿತ್ತದಿಂದ ಇದ್ದಾರೆಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ನಂತರ ಪ್ರಸಾರ ಭಾರತಿಯೊಂದಿಗೆ ಮಾತನಾಡಿದ ರಾಯಭಾರಿಗಳು, ಕ್ಯಾಪ್ಟನ್‌ಗೆ ಉತ್ತಮ ಚಿಕಿತ್ಸೆ ಲಭಿಸುತ್ತಿದೆ. ಭಾರತೀಯ ರಾಯಭಾರ ಕಚೇರಿಯು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಮೇಲೆ ದಾಳಿಯ ಹಿಂದೆ ಇರಾನ್ ಕೈವಾಡ ಇರಬಹುದು: ಟ್ರಂಪ್
ಗುರುವಾರವಷ್ಟೇ, ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ತೋರಿದ ಧೈರ್ಯ ಹಾಗೂ ಸಮಯಪ್ರಜ್ಞೆಗಾಗಿ ಪ್ರಧಾನಿ ಮೋದಿ ಅವರು ಕ್ಯಾಪ್ಟನ್ ಮಚ್ಚಾರ್ ಅವರನ್ನು ಶ್ಲಾಘಿಸಿದ್ದರು. ಪೈಲಟ್ ಅವರ ಈ ಶೌರ್ಯವು ಇಡೀ ದೇಶಕ್ಕೆ ಹೆಮ್ಮೆ ತಂದಿದೆ ಮತ್ತು ದೊಡ್ಡ ದುರಂತವೊಂದನ್ನು ತಪ್ಪಿಸಲು ನೆರವಾಗಿದೆ ಎಂದು ಮೋದಿ ಹೇಳಿದ್ದರು.

