ಚಿಕ್ಕಮಗಳೂರು: ರಾತ್ರಿ ವೇಳೆ ಶಿಕಾರಿಗೆ (Hunting) ತೆರಳಿದ್ದಾಗ ಮಿಸ್ಫೈರ್ ಆಗಿ ಯುವಕ ಸಾವನ್ನಪ್ಪಿರುವ ಘಟನೆ ಕೊಪ್ಪ (Koppa) ತಾಲೂಕಿನ ಕಾಡಂಚಿನ ಗ್ರಾಮವಾದ ಕಡೇಮನೆಯಲ್ಲಿ ನಡೆದಿದೆ.
ಗ್ರಾಮದ ಚೇತನ್ ಗುಂಡು ಬಿದ್ದು ಸಾವನ್ನಪ್ಪಿದ ಯುವಕ. ಸೆ.30 ರ ರಾತ್ರಿ 7 ಜನ ಸ್ನೇಹಿತರು ಅರಣ್ಯಕ್ಕೆ ಬೇಟೆ ತೆರಳಿದ್ದರು. ಬೇಟೆ ವೇಳೆ ಪ್ರಾಣಿ ಮೇಲೆ ಗುಂಡು ಹಾರಿಸುವಾಗ ಮಿಸ್ ಫೈರ್ ಆಗಿ ಜೊತೆಗಿದ್ದ ಚೇತನ್ಗೆ ಗುಂಡು ಬಿದ್ದಿದೆ. ಜೊತೆಗಿದ್ದ ಸ್ನೇಹಿತರು ಕೂಡಲೇ ಆತನನ್ನ ಜಯಪುರ ಆಸ್ಪತ್ರೆಗೆ ದಾಖಲಿಸಲು ಕರೆತಂದರೂ ಕೂಡ ಹೊಟ್ಟೆ ಭಾಗಕ್ಕೆ ಗುಂಡು ತಗುಲಿದ್ದ ಕಾರಣ ಚೇತನ್ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಫಿ ಎಸ್ಟೇಟ್ನಲ್ಲಿ ಗುಂಡೇಟಿನಿಂದ ರೈತ ಸಾವು – ಮಿಸ್ಫೈರ್ ಶಂಕೆ
ಏಳು ಜನರಲ್ಲಿ ಚೇತನನ್ನ ಆಸ್ಪತ್ರೆಗೆ ಕರೆತಂದ ಮೂವರು ಯುವಕರನ್ನ ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಗುಂಡು ಹಾರಿಸಿದ ಉಳಿದ ಮೂವರು ನಾಪತ್ತೆಯಾಗಿದ್ದಾರೆ. ತಲೆಮರೆಸಿಕೊಂಡಿರುವ ಮೂವರಿಗೆ ಪೊಲೀಸರು ಬಲೇ ಬೀಸಿದ್ದಾರೆ.
ಜಯಪುರ ಆಸ್ಪತ್ರೆ ಮುಂಭಾಗ ಎದೆ ಮಟ್ಟದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆ ಬಳಿಕ ಫೈರ್ ಉದ್ದೇಶಪೂರ್ವಕವಾಗಿ ಆಗಿರೋದಾ ಅಥವಾ ಮಿಸ್ ಆಗಿ ಆಗಿರೋದಾ ಎಂಬುದು ಸ್ಪಷ್ಟವಾಗಲಿದೆ. ಇದನ್ನೂ ಓದಿ: ದಿವ್ಯಾಗರ್ ಬೀಚ್ಲ್ಲಿ ಘೋರ ದುರಂತ – ಪ್ರವಾಸಕ್ಕೆ ಬಂದಿದ್ದ 8 ವಿದ್ಯಾರ್ಥಿಗಳು ಸಮುದ್ರದ ಪಾಲು

