ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ (Petrol, Diesel Price Hike) ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumr) ಇದು “ಮಿಸ್ಟರ್ ನರೇಂದ್ರ ಮೋದಿ ಅವರ ಕೊಡುಗೆ ಎಂದು ಲೇವಡಿ ಮಾಡಿದ್ದಾರೆ.
ಇಂಧನ ಬೆಲೆ ಏರಿಕೆಗೆ ಪ್ರಧಾನಿಯವರ ವಿಫಲ ವಿದೇಶಾಂಗ ನೀತಿಯೇ ಕಾರಣ ಎಂದು ಆರೋಪಿಸಿದ ಅವರು, ಬೇರೆ ದೇಶಗಳ ಜೊತೆ ಸರಿಯಾದ ಸಂಬಂಧ ಇಟ್ಟುಕೊಳ್ಳುವಲ್ಲಿ ಪ್ರಧಾನಿ ವಿಫಲವಾಗಿದ್ದಾರೆ. ಜನರು ತಮ್ಮ ದುಡಿಮೆಯಲ್ಲಿ ಬದುಕುತ್ತಿದ್ದಾರೆ, ಆದರೆ ಬೆಲೆ ಕಡಿಮೆ ಮಾಡಲು ಇವರಿಂದ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಚಿನ್ನ ಖರೀದಿಸಬೇಡಿ, ಎಣ್ಣೆ ಬಳಸಬೇಡಿ ಎಂದು ಪ್ರಧಾನಿ ಹೇಳುತ್ತಾರೆ. ಮಾಂಗಲ್ಯ ಸರ ಎಲ್ಲರಿಗೂ ಅಗತ್ಯ, ಅದನ್ನು ತೆಗೆದುಕೊಳ್ಳಬೇಡಿ ಎನ್ನಲು ಹೇಗೆ ಸಾಧ್ಯ? ಇದೆಲ್ಲವೂ ಅವಾಸ್ತವಿಕ ಮಾತುಗಳು ಸಿಟ್ಟು ಹೊರಹಾಕಿದರು.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಡಿಪಿಎಂ, ನಾನು ಬಿಡದಿಗೆ ಹೋಗುತ್ತೇನೆ. ರೈತರು ನನ್ನ ವಿರುದ್ಧ ಘೋಷಣೆ ಕೂಗಬಹುದು ಅಥವಾ ಕಲ್ಲು ತೂರಾಟ ನಡೆಸಬಹುದು. ಅದಕ್ಕೇನು ಹೆದರಲು ಸಾಧ್ಯವೇ? ಕುಮಾರಸ್ವಾಮಿಯವರು ಈ ಹಿಂದೆ ಆರಂಭಿಸಿದ್ದ ಕೆಲಸವನ್ನೇ ನಾನು ಮುಂದುವರಿಸುತ್ತಿದ್ದೇನೆ. ಚರ್ಚೆಗೆ ದಿನಾಂಕ ನಿಗದಿ ಮಾಡಲಿ, ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ತಮ್ಮ ಜನ್ಮದಿನದ ಅಂಗವಾಗಿ ನಗರದಲ್ಲಿ ಬ್ಯಾನರ್ ಅಳವಡಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇವುಗಳನ್ನು ಕೂಡಲೇ ತೆರವುಗೊಳಿಸಲು ಸೂಚಿಸಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಿರುವುದು ತಪ್ಪು. ಬ್ಯಾನರ್ ಹಾಕಿದವರ ಮೇಲೆ ಕೇಸ್ ದಾಖಲಿಸಲು ಹೇಳಿದ್ದೇನೆ. ಬಿಜೆಪಿ ಸೇರಿದಂತೆ ಬೇರೆ ಪಕ್ಷದವರು ಉದ್ದೇಶಪೂರ್ವಕವಾಗಿ ಬ್ಯಾನರ್ ಹಾಕಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ಹೈಕಮಾಂಡ್‌ನಿಂದ ಬರಲಿರುವ ‘ಸಿಹಿ ಸುದ್ದಿ’ ಅಥವಾ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಡಿ.ಕೆ. ಶಿವಕುಮಾರ್ ಅಲ್ಲಿಂದ ತೆರಳಿದರು.

