– ಪ್ರಮುಖ ಅರೋಪಿ ಸೇರಿ ಐವರು ಪೊಲೀಸರ ವಶಕ್ಕೆ
ಬೆಂಗಳೂರು: ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ (BJP Leaders) ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು (Shivajinagar Police) ಪ್ರಮುಖ ಆರೋಪಿ ಪುಣ್ಯೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿ ಒಂದು ಬಾಕ್ಸ್‌ನಲ್ಲಿ ಮೊಟ್ಟೆಗಳನ್ನು ತಂದು ಘಟನೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯದ ಹಿಂದೆ ಇನ್ನೂ ಕೆಲವರು ಇದ್ದಾರೆಯೇ ಎಂಬ ಅನುಮಾನವೂ ಪೊಲೀಸರಿಗೆ ಮೂಡಿದ್ದು, ಆ ದಿಕ್ಕಿನಲ್ಲೂ ತನಿಖೆ ಮುಂದುವರಿದಿದೆ. ಪ್ರಮುಖ ಅರೋಪಿ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೊಟ್ಟೆಗಳನ್ನು ಎಲ್ಲಿಂದ ತಂದಿದ್ದ, ಘಟನೆ ಪೂರ್ವನಿಯೋಜಿತವಾಗಿತ್ತೇ, ಮೊಟ್ಟೆ ಎಸೆಯಲು ಯಾರಾದರೂ ಸೂಚನೆ ನೀಡಿದ್ದರೇ ಹಾಗೂ ಪುಣ್ಯೇಶ್ ಜೊತೆಗೆ ಇದ್ದವರು ಯಾರು ಎಂಬ ಬಗ್ಗೆ ಪೊಲೀಸರು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.ಇದನ್ನೂ ಓದಿ: ಕಚ್ಚಾ ತೈಲ ಬ್ಯಾರಲ್‌ಗೆ 96 ಡಾಲರ್‌ಗೆ ಜಿಗಿತ – ಶೀಘ್ರವೇ 100 ಡಾಲರ್ ತಲುಪುವ ಸಾಧ್ಯತೆ
ಏನಿದು ಪ್ರಕರಣ?
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು.
ಈ ವೇಳೆ ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಲೊಕೇಶನ್ ಕಳುಹಿಸಲಾಗಿತ್ತು. ಕ್ವೀನ್ಸ್ ರೋಡ್ ಬಳಿ ಕಾರಿನಿಂದ ಇಳಿದ ತಕ್ಷಣ ಅಲ್ಲಿದ್ದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಅವರ ಮೇಲೆ ಮೊಟ್ಟೆ ಎಸೆದು, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಶಾಸಕರನ್ನು ಸುರಕ್ಷಿತವಾಗಿ ಸ್ಥಳದಿಂದ ಕರೆದೊಯ್ದಿದ್ದರು. ಇದನ್ನೂ ಓದಿ: ಮರಿಗಳ ಜೊತೆ ಕಾಡಾನೆಗಳ ದಾಂಧಲೆ – ಸುಮಾರು 8 ಎಕರೆ ಪ್ರದೇಶದ ಕಾಫಿ ತೋಟ ನಾಶ
