ಬೆಂಗಳೂರು: ನಗರದಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ(Footpath Operation) ತೀವ್ರಗೊಂಡಿದ್ದು ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ ಬಳಿಕ ಈಗ ಫುಟ್‌ಪಾತ್ ಮೇಲಿರುವ ಸರ್ಕಾರಿ ಸ್ವಾಮ್ಯದ ಮಳಿಗೆಗಳಿಗೂ ಮುಹೂರ್ತ ನಿಗದಿಯಾಗಿದೆ!
ಬೆಂಗಳೂರಿನಾದ್ಯಂತ(Bengaluru) ಒಟ್ಟು 1,500 ಕಿ.ಮೀ ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಬೃಹತ್ ಗುರಿ ಹೊಂದಲಾಗಿದ್ದು, ಈಗಾಗಲೇ 500 ಕಿ.ಮೀಗೂ ಹೆಚ್ಚು ಭಾಗವನ್ನು ತೆರವುಗೊಳಿಸಲಾಗಿದೆ.
ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುವ ಬಡವರ ಅಂಗಡಿಗಳನ್ನು ತಕ್ಷಣವೇ ತೆರವುಗೊಳಿಸುವ ಅಧಿಕಾರಿಗಳು, ಅಲ್ಲಿಯೇ ಇರುವ ಸರ್ಕಾರಿ ಸ್ವಾಮ್ಯದ ನಂದಿನಿ ಬೂತ್(Nandini Booth), ಹಾಪ್‌ಕಾಮ್ಸ್ (HOPCOMS) ಹಾಗೂ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ತಂಟೆಗೆ ಹೋಗುತ್ತಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, ನಿಯಮ ಎಲ್ಲರಿಗೂ ಒಂದೇ. ಫುಟ್‌ಪಾತ್ ಮೇಲಿರುವ ಸರ್ಕಾರಿ ಸ್ವಾಮ್ಯದ ಮಳಿಗೆಗಳನ್ನೂ ತೆರವುಗೊಳಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಎಸ್‌ಐಆರ್ ಅಂತ್ಯಕ್ಕೆ ಇನ್ನೆರಡು ವಾರ ಬಾಕಿ – ರಾಜ್ಯಾದ್ಯಂತ 45 ಲಕ್ಷ ಮತದಾರರ ಹೆಸರು ನಾಪತ್ತೆ
ವ್ಯಾಪಾರಿಗಳ ಮಳಿಗೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಜಿಬಿಎ, ಸರ್ಕಾರಿ ಸಂಸ್ಥೆಗಳಿಗೆ ಸೇರಿದ ನಂದಿನಿ ಬೂತ್ ಹಾಗೂ ಹಾಪ್‌ಕಾಮ್ಸ್‌ಗಳನ್ನು ನಿಜಕ್ಕೂ ತೆರವು ಮಾಡುತ್ತದೆಯೇ ಅಥವಾ ಇದು ಕೇವಲ ಹೇಳಿಕೆಗೆ ಸೀಮಿತವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
