Sunday, 21st July 2019

ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ: ವಿ.ಎಸ್ ಉಗ್ರಪ್ಪ

ಬಳ್ಳಾರಿ: ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಸದ್ಯ ಉಗ್ರಪ್ಪ ಗೆಲುವು ಸಾಧಿಸಿದ ನಂತರ ಜನರಿಗೆ ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ ಎಂದು ಹೇಳುತ್ತಾ ತಮ್ಮ ಸಂತಸವನ್ನು ಹೊರಹಾಕಿದ್ದಾರೆ.

ಬಳ್ಳಾರಿ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳು. ನಾನು ಬಳ್ಳಾರಿ ಜನರ ಮನೆ ಮಗನಾಗಿ, ತಮ್ಮನಾಗಿ ಕೆಲಸ ಮಾಡುವೆ. ಯಾವತ್ತೂ ಅಪ್ರಮಾಣಿಕವಾಗಿ ನಡೆದುಕೊಳ್ಳುವುದಿಲ್ಲ. ಈ ಗೆಲುವು ಬಳ್ಳಾರಿ ಜನರ ಗೆಲುವಾಗಿದೆ. ಯಾರೂ ದಬ್ಬಾಳಿಕೆ, ಸರ್ವಾಧಿಕಾರ ಧೋರಣೆಯ ವಿರುದ್ಧದ ಗೆಲುವು ಆಗಿದೆ. 2019ರ ಮೋದಿಯ ಜಿಎಸ್‍ಟಿ, ನೋಟು ನಿಷೇಧ, ಡಿಸೇಲ್ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧದ ಅಲೆಯಾಗಿದೆ. ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದ ಮೋದಿ 39 ಸಾವಿರ ಕೋಟಿಯ ರಫೇಲ್ ಹಗರಣ ಮಾಡಿದ್ದಾರೆ ಎಂದು ಆರೋಪಿಸಿದರು.

ನಾಲ್ಕು ತಿಂಗಳ ಅವಧಿಯಲ್ಲಿ ನನಗೆ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡುವೆ. ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುವೆ. ಪರಿಣಿತಿ ಹೊಂದಿದವರ ಸಂಪರ್ಕ ಸಾಧಿಸುವೆ. ಜನರ ಬಳಿ ಹೋಗಿ ಅವರ ಸಮಸ್ಯೆ ಅರಿತುಕೊಳ್ಳುವೆ. ಸಾರ್ವತ್ರಿಕ ಚುನಾವಣೆಗೂ ನಾನೇ ಅಭ್ಯರ್ಥಿಯಾಗುವ ಬಗ್ಗೆ ಪಕ್ಷದ ಆದೇಶಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

ನಾನು ಕಾಂಗ್ರೆಸ್ ನ ಶಿಸ್ತಿನ ಸಿಪಾಯಿ. ನನಗೆ ಸರ್ ಅನ್ನಬೇಡಿ. ನನ್ನನ್ನು ನಿಮ್ಮಲ್ಲಿ ಒಬ್ಬನಾಗಿ ಕರೆದರೆ ಸಾಕು. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಇಲ್ಲೆ ಇರುವೆ. ನನ್ನ ಗೆಲುವಿಗೆ ಎಲ್ಲರ ಸಹಕಾರ. ಪ್ರಾಮಾಣಿಕ ಪ್ರಯತ್ನ ಕಾರಣವಾಯಿತು ಎಂದು ಹೇಳುತ್ತಾ ಶಾಸಕ ಶ್ರೀರಾಮುಲು ಹೇಳಿಕೆಗೆ ಉಗ್ರಪ್ಪ ತಿರುಗೇಟು ನೀಡಿದ್ದಾರೆ.

ಜನಾದೇಶವನ್ನು ಲಘುವಾಗಿ ಪರಿಗಣಿಸಬಾರದು. ನಾನು ಎಂಎಲ್‍ಸಿ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಬಳ್ಳಾರಿಗೆ ಪ್ಯಾಕೇಜ್ ಕೊಡುವುದರ ಬಗ್ಗೆ ನಾನು ಮಾತನಾಡಿಲ್ಲ. ಆದರೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮಾಣಿಕ ಪ್ರಯತ್ನ ಮಾಡುವೆ. ಜನರಿಗೆ ನನ್ನ ಶರ್ಟ್ ಹಿಡಿದು ಕೇಳುವ ಹಕ್ಕು ಬಳ್ಳಾರಿ ಜನರಿಗಿದೆ ಎಂದು ಉಗ್ರಪ್ಪ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *