– ಆರ್‌ಎಸ್‌ಎಸ್ ನೋಂದಣಿ ಮಾಡಿದರೆ, ಅನಗತ್ಯ ಆರೋಪಗಳಿಗೆ ಅವಕಾಶ ಇರಲ್ಲ ಎಂದ ಶ್ರೀಗಳು
ಉಡುಪಿ: ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Teertha Swami) ಪ್ರತಿಕ್ರಿಯೆ ನೀಡಿದ್ದಾರೆ. ಟ್ರಸ್ಟ್ ಸದಸ್ಯರಾಗಿರುವ ಶ್ರೀಗಳು, ಜುಲೈ 11ರಂದು ನಡೆಯುವ ಟ್ರಸ್ಟ್ ಸಭೆಯಲ್ಲಿ ಈ ವಿಷಯ ಚರ್ಚೆಯಾಗಲಿದ್ದು, ಸಂಪೂರ್ಣ ಮಾಹಿತಿ ಪಡೆದ ಬಳಿಕವೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ತಪ್ಪು ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ.
ರಾಮಮಂದಿರ (Ram Temple) ಟ್ರಸ್ಟ್‌ನಲ್ಲಿ ನಡೆದಿತ್ತೆನ್ನಲಾದ ಅವ್ಯವಹಾರದ ಆರೋಪದ ಬಗ್ಗೆ ಮಾತನಾಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಾಧ್ಯಮ ವರದಿಗಳ ಆಧಾರದ ಮೇಲೆ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ. ಜುಲೈ 11ರಂದು ಟ್ರಸ್ಟ್ ಸಭೆ ನಡೆಯಲಿದ್ದು, ಅಲ್ಲಿ ವಿಷಯ ಚರ್ಚೆಗೆ ಬರಲಿದೆ. ಸಭೆಯಲ್ಲಿ ಭಾಗವಹಿಸಿ ಸತ್ಯಾಸತ್ಯತೆ ತಿಳಿದು ಬಳಿಕವೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು. ಇದನ್ನೂ ಓದಿ: ದಿನಕ್ಕೆ 2 ಶಿಫ್ಟ್, 40 ಸಿಬ್ಬಂದಿ ಬಳಕೆ – ರಾಮನ ದೇಣಿಗೆ ಲೆಕ್ಕ ಹೇಗೆ ನಡೆಯುತ್ತೆ?
ಸಿಂಧಿ ಸಮುದಾಯ 200 ಕೆ.ಜಿ. ಬೆಳ್ಳಿ ದೇಣಿಗೆ ನೀಡಿದ್ದರೂ ಗೌರವ ನೀಡಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ದೇಣಿಗೆ ನೀಡುವವರು ಕಡ್ಡಾಯವಾಗಿ ರಶೀದಿ ಪಡೆಯಬೇಕು. ರಶೀದಿ ನೀಡದಿರುವುದು ಗಂಭೀರ ತಪ್ಪಾಗಿದ್ದು, ಕೇವಲ ಬಾಯಿಮಾತಿನ ಹೇಳಿಕೆಗಳಿಗಿಂತ ದಾಖಲೆಗಳಿಗೆ ಮಹತ್ವವಿದೆ ಎಂದು ತಿಳಿಸಿದರು.
ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ ಅವರು, ಆರೋಪಗಳಲ್ಲಿ ಸತ್ಯವಿದ್ದರೆ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಶ್ರೀಗಳು ಒತ್ತಾಯಿಸಿದರು. ದೇಶ-ವಿದೇಶದ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ರಾಮಮಂದಿರದಲ್ಲಿ ಇಂತಹ ಘಟನೆ ನಡೆಯಬಾರದು ಎಂದರು. ಟ್ರಸ್ಟ್ ಸದಸ್ಯನಾಗಿ ತಾವು ಹಲವು ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ ಶ್ರೀಗಳು, ಸಂಬಂಧಪಟ್ಟವರು ವಿಶ್ವಾಸಾರ್ಹರಾಗಿರಬೇಕಿತ್ತು ಎಂದು ಹೇಳಿದರು. ಟ್ರಸ್ಟ್‌ನಲ್ಲಿ ಸೇವಾ ಪಟ್ಟಿ ಪ್ರಕಟಿಸದಿರುವ ಕುರಿತು ಈಗಾಗಲೇ ನಿರ್ಧಾರವಾಗಿತ್ತು ಎಂದೂ ವಿವರಿಸಿದರು. ಇದನ್ನೂ ಓದಿ: ರಾಮಮಂದಿರ ದೇಣಿಗೆ; 42 ದಿನಗಳಲ್ಲಿ 70 ಬಾರಿ ಕಳ್ಳತನ – ತನಿಖೆ ವೇಳೆ ಎಸ್‌ಐಟಿ ಸಿಕ್ತು ಸಾಕ್ಷ್ಯ
ಇದೇ ವೇಳೆ, ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡುವ ಬದಲು ಬಡವರಿಗೆ ಮನೆ ನಿರ್ಮಿಸಿಕೊಡುವಂತಹ ಸಮಾಜಸೇವೆ ಮಾಡುವುದೇ ನಿಜವಾದ ರಾಮಸೇವೆ ಎಂದು ಶ್ರೀಗಳು ಕರೆ ನೀಡಿದರು. ರಾಜ್ಯ ಸರ್ಕಾರದ ತನಿಖೆಯ ಮೇಲೆ ವಿಶ್ವಾಸವಿದೆ ಎಂದೂ ಹೇಳಿದರು. ಆರ್‌ಎಸ್‌ಎಸ್ ನೋಂದಣಿ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಸಂಘಟನೆಯನ್ನು ನೋಂದಣಿ ಮಾಡಿದರೆ ಅನಗತ್ಯ ಆರೋಪಗಳಿಗೆ ಅವಕಾಶ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
