LatestMain PostMost SharedNationalUncategorized

ಪನ್ನೀರ್‍ಸೆಲ್ವಂ ಹೇಳಿದ ಅಮ್ಮನ ‘ಆತ್ಮ’ಕಥೆ!

– ನಾನೇ ಸಿಎಂ ಆಗಬೇಕೆಂದು ಅಮ್ಮಾ ಬಯಸಿದ್ದರು
– ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಅಸಮಾಧಾನ
– ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ
– ಕೊನೆಗೂ ಮನದ ದುಗುಡ ಹೊರಹಾಕಿದ ಒಪಿಎಸ್

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಸುದ್ದಿಯ ನಡುವೆಯೇ ತಮಿಳುನಾಡು ಸಿಎಂ ಒ.ಪನ್ನೀರ್‍ಸೆಲ್ವಂ ತುಟಿಬಿಚ್ಚಿದ್ದಾರೆ. ಪನ್ನೀರ್‍ಸೆಲ್ವಂ ಮಾತುಗಳನ್ನು ನೋಡಿದರೆ ಅವರು ಬಂಡಾಯದ ಬಾವುಟ ಹಾರಿಸಿದ ಲಕ್ಷಣ ಸ್ಪಷ್ಟವಾಗಿ ಗೋಚರಿಸಿದೆ. ತಮಿಳುನಾಡಿನಲ್ಲಿ ಮಂಗಳವಾರ ರಾತ್ರಿ 9 ಗಂಟೆ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಆರಂಭವಾದವು. ಮರೀನಾ ಬೀಚ್‍ನಲ್ಲಿರುವ ಜಯಲಲಿತಾ ಸಮಾಧಿ ಬಳಿಗೆ ಆಗಮಿಸಿದ ಪನ್ನೀರ್ ಸೆಲ್ವಂ ಸಮಾಧಿ ಮುಂದೆ ಕೂತು ಧ್ಯಾನ ಮಗ್ನರಾದರು. ಸುಮಾರು ಅರ್ಧ ಗಂಟೆಗಳ ಕಾಲ ಇದೇ ರೀತಿಯಲ್ಲಿಯೇ ಒಪಿಎಸ್ ಕೂತಿದ್ದರು. ಇದಾದ ಬಳಿಕ ಪನ್ನೀರ್‍ಸೆಲ್ವಂ ಮಾಧ್ಯಮಗಳ ಮುಂದೆ ಬಂದು ಮಾತಿಗೆ ನಿಂತರು. ಮಾತಿನ ನಡುವೆಯೇ ಒಪಿಎಸ್ ಕಣ್ಣೀರನ್ನೂ ಹಾಕಿದರು.

ಸಮಾಧಿಗೆ ನಮಿಸಿದ ಬಳಿಕ ಬಂದ ಒ.ಪನ್ನೀರ್‍ಸೆಲ್ವಂ ಹೇಳಿದ್ದಿಷ್ಟು.

ನನ್ನ ನಾಯಕಿಗೆ ನಾನು ಗೌರವ ಸಲ್ಲಿಸಿದ್ದೇನೆ. ನಾನು ದೇಶದ ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೆಲವು ಸತ್ಯವನ್ನು ಹೇಳಬೇಕೆಂದು ಅಮ್ಮನ ಆತ್ಮ ನನಗೆ ಹೇಳಿದೆ. ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ನಾನೇ ಸಿಎಂ ಆಗಬೇಕು ಎಂದು ಸಾವಿಗೂ ಮುನ್ನ ಹೇಳಿದ್ದರು ಎಂದು ಪನ್ನೀರ್‍ಸೆಲ್ವಂ ಸ್ಪಷ್ಟಪಡಿಸಿದರು.

ನನ್ನ ಮೇಲೆ ಒತ್ತಡ ಹಾಕಿ ರಾಜೀನಾಮೆ ಪಡೆದಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನನ್ನು ಪದೇ ಪದೇ ಅವಮಾನಿಸಿದರು. ಶಶಿಕಲಾ ಸಿಎಂ ಆಗಬೇಕೆಂದು ಕೆಲವರು ನನಗೆ ಹೇಳಿದರು. ನಾನು ಇದರ ಅಗತ್ಯವೇನು ಎಂದು ಪ್ರಶ್ನಿಸಿದ್ದಕ್ಕೆ ಒಬ್ಬನೇ ವ್ಯಕ್ತಿ ಸಿಎಂ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರಬೇಕು ಎಂದು ಹೇಳಿದರು. ಪಕ್ಷದ ಕಚೇರಿಯಲ್ಲೇ ಶಾಸಕರ ಸಭೆ ನಡೆಯುತ್ತಿದ್ದರೂ ನನಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಎಲ್ಲಾ ವಿಚಾರಗಳನ್ನೂ ತಿಳಿಸುವಂತೆ ಜಯಲಲಿತಾ ಆತ್ಮ ನನಗೆ ಹೇಳಿದೆ. ಹೀಗಾಗಿ ನಾನು ಇದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದು ಪನ್ನೀರ್‍ಸೆಲ್ವಂ ಹೇಳಿದರು.

ಕಳೆದ ಸೆಪ್ಟೆಂಬರ್‍ನಲ್ಲಿ ಮನೆಯಲ್ಲೇ ಕುಸಿದು ಬಿದ್ದಿದ್ದ ಜಯಲಲಿತಾ ಅವರನ್ನು ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಲಲಿತಾ ಕಳೆದ ವರ್ಷ ಡಿಸೆಂಬರ್ 6ರಂದು ಸಾವನ್ನಪ್ಪಿದ್ದರು. ಅಂದು ಮಧ್ಯರಾತ್ರಿಯಲ್ಲೇ ಒ.ಪನ್ನೀರ್‍ಸೆಲ್ವಂ ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಕಳೆದ ಭಾನುವಾರ ಶಶಿಕಲಾ ನಟರಾಜನ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಇದಾದ ಬಳಿಕ ಒ.ಪನ್ನೀರ್‍ಸೆಲ್ವಂ ರಾಜೀನಾಮೆ ನೀಡಿದ್ದರು. ಆದರೆ ಮುಂದಿನ ಸಿಎಂ ಅಧಿಕಾರ ಸ್ವೀಕರಿಸುವವರೆಗೆ ನೀವೇ ಸಿಎಂ ಆಗಿ ಮುಂದುವರಿಯಿರಿ ಎಂದು ತಮಿಳುನಾಡಿನ ರಾಜ್ಯಪಾಲರು ಸೂಚಿಸಿದ್ದರು.

Related Articles

Leave a Reply

Your email address will not be published. Required fields are marked *