ಮೈಸೂರು: ನಗರದ ರಿಂಗ್ ರಸ್ತೆಯರುವ ಫಾಕ್ಸ್ಡೆನ್ ಲಿಕ್ಕರ್ ಗ್ಯಾರೇಜ್ ( Mysuru pub) ರೆಸ್ಟೋ ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ(Fire Accident) ಇಬ್ಬರು ಸಜೀವ ದಹನವಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಪಬ್ ಮಾಲೀಕ ಹಾಗೂ ನಟ ಪ್ರೀತಂ ಪುನೀತ್ (Actor Pritam) ಅವರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವೇ ಎಂಬ ಪ್ರಶ್ನೆ ಎದ್ದಿದೆ.
ಪಬ್‌ನ ಪರವಾನಗಿ (ಲೈಸೆನ್ಸ್) ಅವಧಿ ಮುಗಿದಿದ್ದರೂ ಅಬಕಾರಿ ಇಲಾಖೆಯಿಂದ ನವೀಕರಣ ಮಾಡಿಸದೇ ವ್ಯವಹಾರ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಜೊತೆಗೆ ಅಗ್ನಿ ಸುರಕ್ಷತೆಗೆ ಅಗತ್ಯವಾದ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಕೂಡ ಈ ಅವಘಡಕ್ಕೆ ಪ್ರಮುಖ ಕಾರಣವಾಗಿರಬಹುದು ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
ಪಬ್‌ನ ಒಳಾಂಗಣವನ್ನು ಒಣ ಹುಲ್ಲು ಮತ್ತು ಮರದ ವಸ್ತುಗಳಿಂದ ಅಲಂಕರಿಸಲಾಗಿತ್ತು. ಬೆಂಕಿ ನಂದಿಸುವ ಸಿಲಿಂಡರ್‌ಗಳ ಕೊರತೆ, ಅಗ್ನಿ ಅವಘಡದ ಸಂದರ್ಭ ಬಳಸಬೇಕಾದ ತುರ್ತು ನಿರ್ಗಮನ ದ್ವಾರ (ಫೈರ್ ಎಕ್ಸಿಟ್) ಕೂಡ ಇರಲಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಮೇಲ್ಮಹಡಿಗೆ ವ್ಯಾಪಿಸಿ ಪಬ್‌ನಲ್ಲಿದ್ದ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳು ಹಾಗೂ ಇತರ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.
ದುರಂತದಲ್ಲಿ ಡಾರ್ಜಿಲಿಂಗ್ ಮೂಲದ ಸಾಹಿನ್ ಹಾಗೂ ನೇಪಾಳ ಮೂಲದ ಪ್ರಕಾಶ್ ಸಜೀವ ದಹನವಾಗಿದ್ದಾರೆ. ಗ್ರಾಹಕರಾದ ಸೋನು, ರಮೇಶ್, ಮಹದೇವ ಪ್ರಸಾದ್, ಪ್ರಜ್ವಲ್ ಸೇರಿದಂತೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.ಇದನ್ನೂ ಓದಿ: ಮೈಸೂರು ಪಬ್ ಅಗ್ನಿ ದುರಂತ: 175 ರೂ. ಆಫರ್, ಬೆಂಕಿ ಹರಡಲು ಒಳಾಂಗಣ ವಿನ್ಯಾಸವೇ ಕಾರಣ?
ಅಗ್ನಿ ಅವಘಡ ಸಂಭವಿಸಿದ ವೇಳೆ ಪಬ್ ಮಾಲೀಕ ನಟ ಪ್ರೀತಂ ಪುನೀತ್ ಹಾಗೂ ಅವರ ಸ್ನೇಹಿತ ಅವಿನಾಶ್ ಕೂಡ ಸ್ಥಳದಲ್ಲಿದ್ದರು. ಪ್ರೀತಂ ಅವರ ಕೈ ಹಾಗೂ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು, ಅವಿನಾಶ್ ಅವರ ತಲೆಗೆ ಗಾಯಗಳಾಗಿವೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಪಬ್‌ನಲ್ಲಿದ್ದ ಗ್ರಾಹಕರು ಆತಂಕಗೊಂಡು ಹೊರಬರಲು ಹರಸಾಹಸ ಪಟ್ಟರು. ಕೆಲ ಯುವತಿಯರು ಗ್ರಿಲ್ ಹಿಡಿದು ಕೆಳಗೆ ಜಿಗಿಯಲು ಮುಂದಾಗಿದ್ದರು. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 15ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದರು. ಸೋಮವಾರದ ವಿಶೇಷ ಆಫರ್ ಹಿನ್ನೆಲೆಯಲ್ಲಿ ಪಬ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇದ್ದರು. ಇದರಿಂದ ಅವಘಡದ ವೇಳೆ ಗೊಂದಲ ಮತ್ತಷ್ಟು ಹೆಚ್ಚಾಯಿತು. ಇದನ್ನೂ ಓದಿ: ಮೈಸೂರಿನ ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, 7 ಮಂದಿಗೆ ಗಾಯ
