ಗದಗ: ತವರು ಮನೆ ಅಂದರೆ ಹೆಣ್ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ತಾಯಿ ಕೊಟ್ಟ ತವರಿನ ಉಡುಗೊರೆಯನ್ನು ಜೋಪಾನ ಮಾಡಿಕೊಂಡು ಬರುತ್ತಾರೆ. ಇಲ್ಲೊಬ್ಬರು ಅಜ್ಜಿ ಸುಮಾರು 40 ವರ್ಷಗಳಿಂದ ತಾಯಿ ಕೊಟ್ಟ ಉಡುಗೊರೆಯನ್ನು ಜೋಪಾನ ಮಾಡಿಕೊಂಡು ಬಂದಿದ್ದಾರೆ.
ತವರಿನ ಪ್ರೀತಿಗೆ ಬೆಲೆ ಕಟ್ಟೋಕು ಆಗಲ್ಲ ಎಂಬಂತೆ ತಾಯಿ ಉಡುಗೊರೆಯಾಗಿ ಕೊಟ್ಟ ಎಮ್ಮೆಯಿಂದ ಬೆಣ್ಣೆ ವ್ಯಾಪಾರ ಮಾಡಿಕೊಂಡು ಬೆಣ್ಣೆ ಅಜ್ಜಿ ಎಂದು ಹೆಸರುವಾಸಿಯಾಗಿ ಈ ವೃದ್ಧೆ ಬೆಣ್ಣೆ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಇದರಿಂದ ನಾಲ್ಕು ದಶಕಗಳಿಂದ ತವರಿನ ನೆನಪು ಶಾಶ್ವತವಾಗಿಟ್ಟುಕೊಂಡಿದ್ದಾರೆ.
Advertisement
ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹರದಗಟ್ಟಿ ತಾಂಡಾದ ಸೀತವ್ವ ಲಮಾಣಿ ಅವರು 40 ವರ್ಷದ ಹಿಂದೆ ವಿವಾಹವಾಗಿ ಹರದಗಟ್ಟಿ ತಾಂಡಾಕ್ಕೆ ಬಂದಿದ್ದರು. ಸೀತವ್ವರಿಗೆ ತವರುಮನೆಯವರು ಎಮ್ಮೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಹರದಗಟ್ಟಿ ತಾಂಡಾದ ನೀಲಪ್ಪನನ್ನು ಮದುವೆಯಾದ ವೇಳೆ ಸೀತವ್ವರ ಕುಟುಂಬ ತುಂಬಾ ಬಡತನದಲ್ಲಿತ್ತು. ಕುಟುಂಬಕ್ಕಂಟಿದ ಬಡತನದ ನಿವಾರಣೆಗೆ ಸೀತವ್ವ ತವರು ಮನೆಯವರು ಕೊಟ್ಟ ಎಮ್ಮೆಯನ್ನೇ ಸಾಕಿದರು. ಛಲಬಿಡದ ದಂಪತಿ ಎಮ್ಮೆ ಸಾಕಿ ಅದರಿಂದ ಬೆಣ್ಣೆ ತೆಗೆದು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಒಂದು ಎಮ್ಮೆಯಿಂದ ಆರಂಭವಾದ ಇವರ ಪರಿಶ್ರಮದ ಪಯಣ ಈಗ 9 ಎಮ್ಮೆಗಳ ತುಂಬು ಕುಟುಂಬವಾಗಿದೆ.
Advertisement
Advertisement
ಈ ಕುಟುಂಬ ಈಗ ವಾರಕ್ಕೆ 10 ಕೆಜಿ ವರೆಗೆ ಬೆಣ್ಣೆ ಉತ್ಪಾದಿಸುತ್ತಿದೆ. ವಾರಕ್ಕೆ ಅಂದಾಜು ಐದು ಸಾವಿರ ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ಬಹುತೇಕರು ಇವರು ಗುಣಮಟ್ಟದ ಬೆಣ್ಣೆ ಉತ್ಪಾದನೆಯ ಭರವಸೆಯಿಂದ ಮನೆಗೆ ಬಂದು ಬೆಣ್ಣೆ ಖರೀದಿಸುತ್ತಿದ್ದಾರೆ. ನಿತ್ಯ ನೂರು ರೂಪಾಯಿವರೆಗೆ ಮೊಸರು ಕೂಡ ಮಾರಾಟ ಮಾಡ್ತಾರೆ. ಪ್ರತಿವಾರ ಬೆಣ್ಣೆ ಹಾಗೂ ಮೊಸರು ಸೇರಿ ಅಂದಾಜು 8 ಸಾವಿರ ರೂಪಾಯಿ ವರೆಗೆ ಆದಾಯ ದೊರೆಯುತ್ತಿದೆ. ಈ ಕುಟುಂಬ ಕಷ್ಟದಲ್ಲಿಯೇ ಬೆಣ್ಣೆ ಮಾರಿ ಆರ್ಥಿಕ ಸಂಕಷ್ಟ ನಿವಾರಿಸಿಕೊಂಡಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಿ ಇದ್ದದ್ದರಲ್ಲಿ ಕೊಂಚ ನೆಮ್ಮದಿ ಕಂಡುಕೊಂಡಿದ್ದಾರೆ. ಇಂದು ಅದೆಷ್ಟೋ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ವಿದ್ಯಾರ್ಹತೆಗೆ ತಕ್ಕ ಕೆಲಸ ಬೇಕೆಂದು ಅಲೆದು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಆದ್ರೆ ಸೀತವ್ವ ಹಾಗೂ ನೀಲಪ್ಪ ಅವರ ಪರಿಶ್ರಮದ ಬದುಕು ಇಂದಿನ ಯುವಕರಿಗೆ ಪ್ರಾಯೋಗಿಕ ಪಾಠದಂತಿದೆ ಎಂದು ಸ್ಥಳೀಯ ಶಂಕರ್ ಹೇಳಿದರು.
Advertisement
ನಾಲ್ಕು ದಶಕದ ಈ ಪರಿಶ್ರಮದ ಪಯಣದಲ್ಲಿ ಸೀತವ್ವ ಹಾಗೂ ನೀಲಪ್ಪ ದಣಿವರಿಯದ ಬದುಕು ಸಾಗಿಸಿದ್ದಾರೆ. ಇದರಿಂದಾಗಿ ಭದ್ರತೆಯೇ ಇಲ್ಲದ ಬದುಕಿಗೆ ಬೆಣ್ಣೆ ವ್ಯಾಪಾರ ಭದ್ರತೆ ನೀಡಿದೆ. ತವರಿನ ಕಾಣಿಕೆಯನ್ನು ಉಳಿಸಿಕೊಳ್ಳೋ ಜೊತೆಗೆ ಬದುಕು ರೂಪಿಸಿಕೊಂಡ ಈ ಲಂಬಾಣಿ ಕುಟುಂಬದ ಶ್ರಮದ ಬದುಕು ಇತರರಿಗೂ ಮಾದರಿಯಾಗಿದೆ.