Thursday, 17th October 2019

Recent News

ಅನೈತಿಕ ಸಂಬಂಧ ಹೊಂದಿದ್ದಕ್ಕೆ ಮಹಿಳೆ, ಪುರುಷನ ತಲೆ ಬೋಳಿಸಿದ್ರು!

ಭುವನೇಶ್ವರ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಹಾಗೂ ಪುರುಷನ ತಲೆ ಬೋಳಿಸಿ ಅವಮಾನ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಮಯೂರ್ ಭಂಜ್‍ನ ಕರಾಂಜಿಯಾ ಬ್ಲಾಕ್‍ನ ಮಂಡುವಾ ಗ್ರಾಮದಲ್ಲಿ ಜೂನ್ 22 ರಂದು ಘಟನೆ ನಡೆದಿದೆ. ಮಹಿಳೆಯು ಅದೇ ಗ್ರಾಮದಳು ಹಾಗೂ ಸಂತ್ರಸ್ತ ಪುರುಷ ಸಗುರಾ ಖತುನ್ ಎಂದು ಗುರುತಿಸಲಾಗಿದೆ.

ಆಗಿದ್ದೇನು?:
ಸಗುರಾ ಖತುನ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಅವನು ಮಂಡುವಾ ಗ್ರಾಮದ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಆತನನ್ನು ರೆಡ್‍ಹ್ಯಾಂಡ್ ಆಗಿ ಹಿಡಿದು ಥಳಿಸಲು ಪ್ಲಾನ್ ರೂಪಿಸಿದ್ದರು.

ಸಗುರಾ ಜೂನ್ 22 ರಂದು ಮಹಿಳೆಯ ಮನೆಗೆ ಹೋಗಿದ್ದ. ಇದನ್ನು ನೋಡಿದ್ದ ಗ್ರಾಮಸ್ಥರು ಮಹಿಳೆಯ ಮನೆಯ ಬಾಗಿಲು ಮುರಿದು, ಇಬ್ಬರನ್ನೂ ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಥಳಿಸಿದ್ದಾರೆ. ಬಳಿಕ ತಲೆ ಬೋಳಿಸಿ ಅವಮಾನ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಸಂಬಂಧ ಸಂತ್ರಸ್ತೆ ಹಾಗೂ ಪುರುಷ ಕಾರಂಜಿಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಸ್ಥರು ತಲೆ ಬೋಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಸಮುದಾಯ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿದ್ದೇವೆ. ಉಳಿದ ಆರೋಪಿಗಳಿಗೆ ಶೋಧ ಕಾರ್ಯ ನಡೆದಿದೆ ಎಂದು ಮಯೂರ್ ಭಂಜ್‍ನ ಎಸ್‍ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *