ಬೆಂಗಳೂರು: ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ (KPSC) ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಇದೀಗ ಅವರ ಪುತ್ರಿಗೆ ನೋಟಿಸ್ ನೀಡಲಾಗಿದೆ.
ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಅವರು ವಿಧಾನಸೌಧ ಪೊಲೀಸರಿಗೆ (Vidhanasoudha Police) ದೂರು ನೀಡಿದ್ದು, ಸರ್ಕಾರಿ ಹುದ್ದೆಗಾಗಿ ತಂದೆಯ ಪ್ರಭಾವ ಬಳಸಿ ನೇಮಕಾತಿ ವೇಳೆ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣ ಸಲ್ಲಿಸಿದ್ದಾರೆಂದು ಆರೋಪಿಸಿದ್ದರು. ಅದರನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅದರನ್ವಯ ಇದೀಗ ಪೊಲೀಸರು ಶಿವಶಂಕರಪ್ಪ ಸಾಹುಕಾರ್ ಪುತ್ರಿ ಸುಮಾ ಸಾಹುಕಾರ್ ಅವರಿಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ (Industrial Extension Officer) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸುಮಾ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಹಿಂದುಳಿದ ವರ್ಗಗಳ ಮೀಸಲಾತಿ ಅಥವಾ ಶುಲ್ಕ ವಿನಾಯಿತಿ ಪಡೆಯುವ ದುರುದ್ದೇಶದಿಂದ ಅವರು ತಮ್ಮ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ನಮೂದಾಗಿದ್ದ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು.
ದಾಖಲೆಗಳ ಪರಿಶೀಲನೆ ವೇಳೆ ಸುಳ್ಳು ಆದಾಯ ಪ್ರಮಾಣ ಪತ್ರ ಹಾಗೂ 3ಬಿ ಮೀಸಲಾತಿ ಪ್ರಮಾಣ ಪತ್ರದಲ್ಲಿ ವಾರ್ಷಿಕ ಆದಾಯ 40 ಸಾವಿರ ರೂ. ಎಂದು ನಮೂದಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.ಇದನ್ನೂ ಓದಿ: ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ – KPSC ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್
