ವಿಶ್ವ ಆನೆಗಳ ದಿನದಂದು(World Elephant Day) ಅನಾವರಣಗೊಳ್ಳುತ್ತಿರುವ ಕ್ರಾಸಿಂಗ್ ಪಾತ್ಸ್(Crossing Paths) ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು(Samyukta Hornad) ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ ಮಾನವ-ಆನೆ ಸಂಘರ್ಷದ ಕುರಿತು ಬೆಳಕು ಚೆಲ್ಲುತ್ತದೆ. ಈ ಸಾಕ್ಷ್ಯಚಿತ್ರಕ್ಕೆ ಟೆಕಿಯಾನ್ ಸಂಸ್ಥೆಯ ಸಿಎಸ್ಆರ್ ಇನಿಶಿಯೇಟಿವ್ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆ ಮತ್ತು ಆ ರೋಚಾ ಇಂಡಿಯಾ, ಸಂಪಿಗೆ ಫಿಲ್ಮ್ಸ್ ಪ್ರೊಡಕ್ಷನ್ ಇದಕ್ಕೆ ಸಹಯೋಗ ನೀಡಿವೆ.
ಕಾಡುಗಳು ಕಿರಿದಾಗುತ್ತಾ, ಮಾನವನ ಚಟುವಟಿಕೆಗಳಿಂದಾಗಿ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ, ಆನೆಗಳು ಅನಿವಾರ್ಯವಾಗಿ ಮಾನವ ವಸತಿ ಪ್ರದೇಶಗಳಿಗೆ ಕಾಲಿಡುತ್ತಿವೆ. ಇದು ಸ್ಥಳೀಯ ಸಮುದಾಯಗಳು ಮತ್ತು ವನ್ಯಜೀವಿಗಳು ಇಬ್ಬರ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಂಘರ್ಷಕ್ಕೆ ಕಾರಣವಾಗಿದೆ. ‘ಕ್ರಾಸಿಂಗ್ ಪಾತ್ಸ್’ ಚಿತ್ರವು ಈ ಸಂಘರ್ಷವನ್ನು ಹಾಗೂ ಮಾನವ ಮತ್ತು ಪ್ರಾಣಿಗಳು ಸಹಬಾಳ್ವೆ ನಡೆಸಲು ಕಂಡುಕೊಳ್ಳಬೇಕಾದ ಸುಸ್ಥಿರ ಮಾರ್ಗಗಳ ತುರ್ತು ಅಗತ್ಯವನ್ನು ಪರಿಶೀಲಿಸುತ್ತದೆ.

ಈ ಸಾಕ್ಷ್ಯಚಿತ್ರವು ಆ ರೋಚಾ ಇಂಡಿಯಾ ಸಂಸ್ಥೆಯು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಸುತ್ತಿರುವ ‘ಪ್ರಾಜೆಕ್ಟ್ ಇಎಡಿಡಿಎಸ್’ (ಆನೆಗಳ ಉಪಟಳ ತಡೆಯುವ ಶ್ವಾನ ದಳ) ಯೋಜನೆಯನ್ನು ಹಿಂಬಾಲಿಸುತ್ತದೆ. ಈ ಯೋಜನೆಯು ಸಂರಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ‘ಆ ರೋಚಾ ಇಂಡಿಯಾ’ ತಂಡದ ಅವಿನಾಶ್ ಕೃಷ್ಣನ್ ಅವರು ಈ ಇಎಡಿಡಿಎಸ್ ಕಾರ್ಯಕ್ರಮವನ್ನು ನಿಭಾಯಿಸುತ್ತಿದ್ದಾರೆ. ಗಂಧದ ಗುಡಿ ಮತ್ತು 777 ಚಾರ್ಲಿ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪ್ರತೀಕ್ ಶೆಟ್ಟಿ ಅವರು ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ.
ಈ ಯೋಜನೆಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ, ಪಿಸಿವಿಎಫ್ ಪುಷ್ಕರ್ ಕುಮಾರ್, ಪ್ರಾಜೆಕ್ಟ್ ಎಲಿಫೆಂಟ್ ಯೋಜನಾ ಮುಖ್ಯಸ್ಥರಾದ ಮನೋಜ್ ರಾಜನ್, ಹಾಸನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಆ ರೋಚಾ ಇಂಡಿಯಾದ ರಾಷ್ಟ್ರೀಯ ನಿರ್ದೇಶಕರಾದ ಅವಿನಾಶ್ ಕೃಷ್ಣನ್ ಮುಂತಾದವರ ಸಹಕಾರವಿದೆ.

