ಕಾಲೇಜು ದಿನಗಳು ಜೀವನದ ಅತ್ಯಂತ ಸುಂದರ ಅಧ್ಯಾಯ. ಪಾಠಗಳಿಗಿಂತ ಹೆಚ್ಚು ಮನಸ್ಸಿನಲ್ಲಿ ಉಳಿಯುವುದು ಕೆಲವು ಮುಖಗಳು, ಕೆಲವು ದಾರಿಗಳು ಮತ್ತು ಕೆಲವು ಹೇಳಲಾಗದ ಭಾವನೆಗಳು. ನನ್ನ ಪಾಲಿನ ಆ ನೆನಪಿನಾಕೆ ಹೆಸರು ಅಮಲ್.

ಅವಳನ್ನ ಮೊದಲ ಬಾರಿ ನೋಡಿದ ದಿನವೇ, ಮಳೆ ತೊಳೆದ ಬೆಳಕಿನಂತೆ ಮನಸ್ಸಿನಲ್ಲಿ ಒಂದು ಹೊಸ ಋತು ಆರಂಭವಾಗಿತ್ತು. ಮಾತುಗಳು ಕಡಿಮೆ, ನಗು ಹೆಚ್ಚು. ಅವಳ ಕಣ್ಣುಗಳಲ್ಲಿ ವಿಚಿತ್ರವಾದ ಶಾಂತಿಯಿತ್ತು. ಆ ಶಾಂತಿಯೊಳಗೆ ಸಾವಿರ ಕಥೆಗಳು ಅಡಗಿದ್ದವು.
ಒಂದು ವಾರಾಂತ್ಯದಲ್ಲಿ ಸ್ನೇಹಿತರೊಂದಿಗೆ ಪಶ್ಚಿಮ ಘಟ್ಟದ ದಟ್ಟ ಕಾಡಿನತ್ತ ಪ್ರವಾಸ ಹೊರಟೆವು. ಮಂಜು ಮರಗಳ ಹೆಗಲ ಮೇಲೆ ಹೊದಿಕೆಯಾಗಿ ಕುಳಿತಿತ್ತು. ಹಕ್ಕಿಗಳ ಕಲರವ, ತೇವವಾದ ಮಣ್ಣಿನ ಪರಿಮಳ, ಎಲೆಗಳ ಮೇಲಿಂದ ಜಾರುವ ಮಳೆಹನಿಗಳು-ಪ್ರಕೃತಿಯೇ ನಮ್ಮನ್ನ ತನ್ನ ಮಡಿಲಿಗೆ ಕರೆಯುತ್ತಿದ್ದಂತಿತ್ತು.

ಸಂಜೆ ನಿಧಾನವಾಗಿ ಕತ್ತಲು ಜಾರಿತು. ಕಾಡಿನೊಳಗೆ ಬೀಸುತ್ತಿದ್ದ ಗಾಳಿಯ ಸದ್ದು, ದೂರದಲ್ಲಿ ಕೇಳಿಬರುವ ಅಪರಿಚಿತ ಪ್ರಾಣಿಯ ಕೂಗು, ಮರಗಳ ನಡುವೆ ಅಲುಗಾಡುತ್ತಿದ್ದ ನೆರಳು-ಧೈರ್ಯವಂತರ ಹೃದಯದಲ್ಲೂ ಒಂದು ಕ್ಷಣ ಭಯ ಮೂಡಿಸುವಂತಿತ್ತು. ನಾವು ಉಳಿದಿದ್ದ ಅರಣ್ಯ ವಸತಿಗೃಹದ ಸುತ್ತಲೂ ನಿಶ್ಶಬ್ಧ ತನ್ನ ಸಾಮ್ರಾಜ್ಯ ಕಟ್ಟಿಕೊಂಡಿತ್ತು.
ರಾತ್ರಿ ಕರೆಂಟ್ ಕೂಡ ಏಕಾಏಕಿ ಕೈಕೊಟ್ಟಿತು. ಉಳಿದಿದ್ದು ಕೇವಲ ಚಂದ್ರನ ಮಂಕಾದ ಬೆಳಕು. ಸ್ನೇಹಿತರೆಲ್ಲ ಹಾಸ್ಯ ಮಾಡುತ್ತಿದ್ದರೂ, ಒಳಗೊಂದು ಸಣ್ಣ ಆತಂಕ ಕಾಡುತ್ತಿತ್ತು. ಆಗ ಅಮಲ್ ನಿಧಾನವಾಗಿ ನನ್ನ ಹತ್ತಿರ ಬಂದು, ʻʻಸ್ವಲ್ಪ ಭಯವಾಗುತ್ತಿದೆ,ʼʼ ಎಂದು ಹೇಳಿದಳು. ಆ ಮಾತಿನಲ್ಲಿ ಧೈರ್ಯ ಕೇಳುವ ಮಗುವಿನ ಮುಗ್ಧತೆ ಇತ್ತು.
ನಾನು ಏನೂ ಹೇಳದೇ ಅವಳ ಕೈ ಹಿಡಿದೆ. ಆ ಸ್ಪರ್ಶದಲ್ಲಿ ಯಾವುದೇ ಅತಿರೇಕ ಇರಲಿಲ್ಲ; ಒಬ್ಬರ ಮೇಲೊಬ್ಬರಿಗೆ ಇದ್ದ ನಂಬಿಕೆಯ ಬಿಸಿ ಮಾತ್ರ ಇತ್ತು. ಕಾಡಿನ ಚಳಿ ಹೆಚ್ಚಾಗುತ್ತಿದ್ದರೂ, ಆ ಕ್ಷಣದಲ್ಲಿ ನಮ್ಮ ನಡುವಿನ ಮೌನವೇ ಹೆಚ್ಚು ಮಾತನಾಡುತ್ತಿತ್ತು. ಕೆಲವೊಮ್ಮೆ ಪ್ರೀತಿಗೆ ದೊಡ್ಡ ದೊಡ್ಡ ವಾಗ್ದಾನಗಳ ಅಗತ್ಯವಿರುವುದಿಲ್ಲ, ಒಂದು ನಿಶ್ಶಬ್ದ ಸ್ಪರ್ಶವೇ ಸಾಕಾಗುತ್ತದೆ ಅನ್ನೋದಕ್ಕೆ ಆ ಕ್ಷಣ ಸಾಕ್ಷಿಯಾಗಿತ್ತು.

ಹಠಾತ್ತನೆ ಪೊದೆಯೊಳಗೆ ಏನೋ ಅಲುಗಾಡಿದ ಶಬ್ಧ ಕೇಳಿಸಿತು. ನಾವು ಕ್ಷಣಕಾಲ ಉಸಿರು ಬಿಗಿಹಿಡಿದು ನೋಡುತ್ತಿದ್ದೆವು. ಟಾರ್ಚ್ ಬೆಳಕು ಹರಿಸಿದಾಗ, ಭಯ ಹುಟ್ಟಿಸಿದ್ದದ್ದು ಕೇವಲ ಒಂದು ಜಿಂಕೆ ಎಂಬುದು ಗೊತ್ತಾಯಿತು. ಎಲ್ಲರೂ ನಕ್ಕರು. ಆದರೆ ಆ ಕೆಲವು ಕ್ಷಣಗಳ ಭಯ ನಮ್ಮ ಹೃದಯಗಳನ್ನ ಇನ್ನಷ್ಟು ಹತ್ತಿರ ತಂದಿತ್ತು.
ಮರುದಿನ ಬೆಳಿಗ್ಗೆ ಸೂರ್ಯನ ಮೊದಲ ಕಿರಣಗಳು ಕಾಡಿನ ಎಲೆಗಳ ನಡುವೆ ಜಾರಿಬಂದಾಗ, ಅಮಲ್ ನನ್ನತ್ತ ನೋಡಿ ನಕ್ಕಳು. ಆ ನಗುವಿನಲ್ಲಿ ಗೆಲುವೂ ಇತ್ತು, ನೆಮ್ಮದಿಯೂ ಇತ್ತು. ನಮ್ಮಿಬ್ಬರ ಮನಸ್ಸಿನಲ್ಲಿ ಹೇಳಲಾಗದ ಭಾವನೆಗಳಿಗೆ ಪ್ರಕೃತಿಯ ಮೌನ ಸಾಕ್ಷಿಯಾಗಿತ್ತು.

ಕಾಲೇಜು ಮುಗಿಯಿತು. ಬದುಕಿನ ದಾರಿಗಳು ಬೇರೆಬೇರೆ ದಿಕ್ಕು ಹಿಡಿದವು. ವರ್ಷಗಳು ಕಳೆಯುತ್ತಲೇ ಹೋದವು. ಆದರೆ ಮಳೆಯ ಸುವಾಸನೆ ಬಂದಾಗಲೆಲ್ಲ, ದಟ್ಟ ಕಾಡಿನ ಚಿತ್ರ ಕಣ್ಣೆದುರು ಮೂಡಿದಾಗಲೆಲ್ಲ, ಆ ರಾತ್ರಿ ನೆನಪಾಗುತ್ತದೆ. ಭಯದ ಕತ್ತಲೆಯ ಮಧ್ಯೆಯೂ ಅರಳಿದ್ದ ಅಮಲಳ ಆ ನಗು ಇಂದಿಗೂ ನನ್ನ ನೆನಪಿನ ದೀಪವಾಗಿ ಹೊಳೆಯುತ್ತದೆ.
ಕೆಲವು ಪ್ರವಾಸಗಳು ಕೇವಲ ಸ್ಥಳಗಳನ್ನು ತೋರಿಸುವುದಿಲ್ಲ, ನಮ್ಮೊಳಗಿನ ಭಾವನೆಗಳನ್ನ ಪರಿಚಯಿಸುತ್ತವೆ. ಕೆಲವು ಪ್ರೇಮಕಥೆಗಳು ಅಂತ್ಯ ಕಂಡರೂ, ಅವುಗಳ ನೆನಪುಗಳಿಗೆ ಅಂತ್ಯವಿರುವುದಿಲ್ಲ. ನನ್ನ ಕಾಲೇಜು ಜೀವನದ ಅತ್ಯಂತ ಸುಂದರ ಪ್ರವಾಸವೂ, ಅತ್ಯಂತ ಮೌನವಾದ ಪ್ರೇಮಕಥೆಯೂ, ಕಾಡಿನ ಕತ್ತಲೆಯ ನಡುವೆ ಕೈಹಿಡಿದು ನಡೆದ ಆ ಒಂದು ರಾತ್ರಿಯಲ್ಲೇ ಶಾಶ್ವತವಾಗಿ ಉಳಿದುಬಿಟ್ಟಿದೆ.
ಇಂತಿ ನಿನ್ನವ
ಮನಮೋಹನ….
