Bengaluru CityDistrictsKarnatakaLatestLeading NewsMain Post

ವಿದ್ಯುತ್ ದರ ಹೆಚ್ಚಳ ಇಲ್ಲ: ಸುನಿಲ್ ಕುಮಾರ್ ಸ್ಪಷ್ಟನೆ

Advertisements

ಬೆಂಗಳೂರು: ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆ ದರ ಆಧಾರಿತ ಹೊಂದಾಣಿಕೆ ವೆಚ್ಚದಲ್ಲಿ ಮಾತ್ರ ವ್ಯತ್ಯಾಸವಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಬಗ್ಗೆ ಕೆಲವೆಡೆ ತಪ್ಪು ಸಂದೇಶ ರವಾನೆಯಾಗಿದೆ. ಆದರೆ ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ. ವಿದ್ಯುತ್ ದರವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಿಸುವ ವಾಡಿಕೆಯಿದೆ. ಹೀಗಾಗಿ ದರ ಹೆಚ್ಚಳದ ವದಂತಿ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತ್ತೆ ಮಹದಾಯಿ ಹೋರಾಟಕ್ಕೆ ನಾಂದಿ – ರಾಜ್ಯ ಸರ್ಕಾರಕ್ಕೆ ಕಾನೂನಾಸ್ತ್ರದ ಬಿಸಿ ಮುಟ್ಟಿಸಿದ ರೈತರು

ರಾಜ್ಯದಲ್ಲಿ 13 ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವಿರುತ್ತದೆ. ಇವುಗಳ ಮಾರುಕಟ್ಟೆ ದರದ ಏರಿಳಿತ ಆಧರಿಸಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ನಡೆಸುವುದು ನಿರಂತರ ಪ್ರಕ್ರಿಯೆ ಆಗಿರುತ್ತದೆ. ಈ ಸಂಬಂಧ ಎಸ್ಕಾಂಗಳು ಸಲ್ಲಿಸಿದ ಹೊಂದಾಣಿಕೆ ವೆಚ್ಚ (fuel cost adjustment charges) ಪ್ರಸ್ತಾಪ ಹಿನ್ನೆಲೆಯಲ್ಲಿ ಕೆಇಆರ್‌ಸಿ ಈ ದರ ಪರಿಷ್ಕರಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೈಥಾನ್ ಬಳಸಿ ಗುಂಡಿ ಮುಚ್ಚದ ಬಿಬಿಎಂಪಿಗೆ ಹೈಕೋರ್ಟ್ ಫುಲ್ ಕ್ಲಾಸ್

ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಕೆಇಆರ್‌ಸಿ ವಿವೇಚನಾಧಿಕಾರವಾಗಿದ್ದು, ಕಲ್ಲಿದ್ದಲು ದರ ಆಧರಿಸಿ ಈ ಹೊಂದಾಣಿಕೆ ವೆಚ್ಚ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು. ಹೀಗಾಗಿ ಈ ಪ್ರಕ್ರಿಯೆಯನ್ನು ವಾರ್ಷಿಕ ದರ ಪರಿಷ್ಕರಣೆ ಜೊತೆಗೆ ಥಳುಕು ಹಾಕುವ ಅಗತ್ಯವಿಲ್ಲ ಎಂದು ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Live Tv

Leave a Reply

Your email address will not be published.

Back to top button