ಬಾಗಲಕೋಟೆ: ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರು ಇಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ(Badami) ಭಾಗದ ಬರಪೀಡಿತ(Drought) ಪ್ರದೇಶಗಳಿಗೆ ಭೇಟಿ ನೀಡಿ ರೈತರ ಕಷ್ಟ ಆಲಿಸಿದ್ದಾರೆ.
ಪ್ರವಾಸ ಆರಂಭಿಸುವ ಮುನ್ನ ಜಿಲ್ಲೆಯ ಪ್ರಸಿದ್ಧ ಶಕ್ತಿಪೀಠ ಬಾದಾಮಿಯ ಬನಶಂಕರಿ ದೇವಿಯ ದರ್ಶನ ಪಡೆದ ಅವರಿಗೆ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹಾಗೂ ಹಿರಿಯ ನಾಯಕ ಬಂಡೆಪ್ಪ ಕಾಶಂಪೂರ್ ಸಾಥ್ ನೀಡಿದರು.
ಬಾದಾಮಿಯ ಹಲಕುರ್ಕಿ ಗ್ರಾಮದಲ್ಲಿ ಒಣಗುತ್ತಿರುವ ಗೋವಿನ ಜೋಳದ ಹೊಲಕ್ಕೆ ಭೇಟಿ ನೀಡಿ ಮಣ್ಣಿನ ತೇವಾಂಶ ವೀಕ್ಷಿಸಿದ ನಿಖಿಲ್ ಅವರಿಗೆ ರೈತರು ಹಾರ ಹಾಕಿ ಸ್ವಾಗತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಬರ ಇರುವಾಗ ಹಾರ ಹಾಕಿಸಿಕೊಳ್ಳಲು ಬೇಜಾರಾಗುತ್ತದೆ ಎನ್ನುತ್ತಾ ಅನ್ನದಾತರ ನೋವಿಗೆ ಸ್ಪಂದಿಸಿದರು.
ಖಾಜಿ ಬೂದಿಹಾಳ ಗ್ರಾಮದಲ್ಲಿ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿಯಾದ ವಿಕಲಚೇತನ ವಯೋವೃದ್ಧೆಯೊಬ್ಬರು ನಿಖಿಲ್ ಅವರನ್ನು ಭೇಟಿ ಮಾಡಿ ತ್ರಿಚಕ್ರ ಸೈಕಲ್ ಕೊಡಿಸುವಂತೆ ಮನವಿ ಮಾಡಿದರು. ತಕ್ಷಣವೇ ಸ್ಪಂದಿಸಿದ ನಿಖಿಲ್, ವೃದ್ಧೆಗೆ ವೈಯಕ್ತಿಕವಾಗಿ ಹಣದ ಸಹಾಯ ಮಾಡಿ, ತ್ರಿಚಕ್ರ ಸೈಕಲ್ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲೇ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಅವರಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ 165 ಕೋಟಿ ವಂಚಿಸಿ ವಿದೇಶಕ್ಕೆ ಪರಾರಿ

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, ಜಿಲ್ಲೆಯಲ್ಲಿ ಶೇ. 80ರಷ್ಟು ಬಿತ್ತನೆಯಾಗಿದ್ದರೂ ಮಳೆಯಾಗಿಲ್ಲ. ರೈತರು ಎಕರೆಗೆ 30-40 ಸಾವಿರ ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಈಗಾಗಲೇ 135 ತಾಲೂಕುಗಳ ಬರ ವರದಿ ಸಿದ್ಧವಾಗಿದ್ದರೂ ಸರ್ಕಾರ ಏಕೆ ಬಿಡುಗಡೆ ಮಾಡುತ್ತಿಲ್ಲ? ರೈತರ ಸಾಲದ ಭಾದೆ ತೀರಲು ಎಕರೆಗೆ ಕನಿಷ್ಠ 25 ಸಾವಿರ ರೂ. ಬರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಜಲಾಶಯದಿಂದ ನೀರು ಕೊಡಲು ಆಗಲ್ಲ, ಯಾರೂ ಬಿತ್ತನೆ ಮಾಡಬೇಡಿ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಇತಿಹಾಸದಲ್ಲಿ ಯಾವ ಸಿಎಂ ಕೂಡ ಹೀಗೆ ಹೇಳಿರಲಿಲ್ಲ. ಸಚಿವರು ದೆಹಲಿಗೆ ಓಡುವುದನ್ನು ಬಿಟ್ಟು ರೈತರ ಹೊಲಕ್ಕೆ ಬರಲಿ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಕೃಷಿ ಸಚಿವರೇ ಇಲ್ಲದಂತಾಗಿದೆ ಎಂದರು. ಇದನ್ನೂ ಓದಿ: NDA ಸೇರ್ಪಡೆಯಾಗದೇ ಮಹಿಳಾ ಮೀಸಲಾತಿ, ಡಿಲಿಮಿಟೇಷನ್ ಮಸೂದೆಗೆ ಪವಾರ್ ಬಣ ಬೆಂಬಲ!
ಇಂದು @JanataDal_S ವತಿಯಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡದೊಂದಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಹಲಕುರ್ಕಿ, ಕೊಂಕನಕೊಪ್ಪ, ಹಂಗರಗಿ ಹಾಗೂ ಖಾಜಿಬೂದಿಹಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ರೈತರ… pic.twitter.com/cpVCKnZlAk
— Nikhil Kumar (@Nikhil_Kumar_k) July 15, 2026
ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ ಕನಿಷ್ಠ 5 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕು. ದನಕರುಗಳಿಗಾಗಿ ತಕ್ಷಣವೇ ಹಸಿ ಮೇವಿನ ಬ್ಯಾಂಕ್ ತೆರೆಯಬೇಕು. ಮಲಪ್ರಭಾ, ಘಟಪ್ರಭಾ ನದಿ ಭಾಗದಲ್ಲಿ ವಾಡಿಕೆಗಿಂತ ಶೇ. 42ರಷ್ಟು ಮಳೆ ಕಡಿಮೆಯಾಗಿದ್ದು, ಸಾಲದ ಬಡ್ಡಿಯನ್ನಾದರೂ ಸರ್ಕಾರವೇ ಭರಿಸಬೇಕು ಮತ್ತು ರೈತರ ಆಸ್ತಿ ಜಪ್ತಿ ಮಾಡಬಾರದು ಎಂದು ಆಗ್ರಹಿಸಿದರು.
ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಈ ಸರ್ಕಾರ ದಪ್ಪ ಚರ್ಮದ್ದು. ಅಲ್ಲಿ ಪಕ್ಕಾ ಕಮರ್ಷಿಯಲ್ ರಿಯಲ್ ಎಸ್ಟೇಟ್ ದಂದೆ ಶುರುವಾಗಿದ್ದು, ಶೇ. 80ರಷ್ಟು ರೈತರು ಇದಕ್ಕೆ ಒಪ್ಪಿಲ್ಲ. ಸರ್ಕಾರದ ಯೋಜನೆಗಳು ಕೇವಲ ದಲ್ಲಾಳಿಗಳಿಗೆ ಸಹಕಾರಿಯಾಗುತ್ತಿವೆ ಎಂದು ವಾಗ್ದಾಳಿ ನಡೆಸಿದರು.
