Connect with us

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಾರ ಭಾರೀ ಮಳೆ- ರೆಡ್ ಅಲರ್ಟ್ ಘೋಷಣೆ

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಾರ ಭಾರೀ ಮಳೆ- ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ನೈರುತ್ಯ ಮಾನ್ಸೂನ್ ಸದ್ಯ ದುರ್ಬಲವಾಗಿದ್ದರೂ ಮುಂದಿನ ವಾರ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಅಂದರೆ, ಜೂನ್ 13 ಹಾಗೂ 14 ರಂದು ಆರೆಂಜ್ ಹಾಗೂ ರೆಡ್ ಅಲರ್ಟ್ ನೀಡಲಾಗಿದೆ. ಅದರಲ್ಲೂ ಜೂನ್ 14 ಸೋಮವಾರದಂದು 20 ಸೆಂ.ಮೀ.ಗೂ ಅಧಿಕ ಮಳೆಯಾಗುವ ನಿರೀಕ್ಷೆಯಿದ್ದು, ಈಗಾಗಲೇ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ.

ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದೆ. ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಜೂನ್ 10, 11, 12ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾನುವಾರದಿಂದ ಮಳೆಗಾಲದ ಮಳೆ ತೀವ್ರಗೊಳ್ಳಲಿದೆ. ಆದರೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಆರೆಂಜ್ ಅಲರ್ಟ್
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಜೂನ್ 13, 14 ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಕೆಲವು ಕಡೆ ಜೂನ್ 9 ರಿಂದ 13 ರವರೆಗೆ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೋ ಅಲರ್ಟ್
ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಜೂನ್ 13 ಹಾಗೂ 14 ರಂದು ಎಲ್ಲೋ ಅಲರ್ಟ್ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಯಾದ ಬಳ್ಳಾರಿ ಹಾಗೂ ಚಿತ್ರದುರ್ಗಕ್ಕೆ ಜೂನ್ 13, 14 ರಂದು ಎಲ್ಲೋ ಅಲರ್ಟ್ ನೀಡಲಾಗಿದೆ.

ಎಷ್ಟು ಮಳೆಯಾಗುತ್ತೆ?
64.5 ಮಿ.ಮೀ ನಿಂದ 115.5 ಮಿ.ಮೀ ಒಳಗಡೆ ಮಳೆಯಾಗುವ ಸಾಧ್ಯತೆ ಇದ್ದರೆ ಯೆಲ್ಲೋ ಅಲರ್ಟ್ ಘೋಷಣೆಯಾಗುತ್ತದೆ. 115.6 ಮಿ.ಮೀ ನಿಂದ 204.4 ಮಿ.ಮೀ. ಒಳಗಡೆ ಮಳೆಯಾಗಲಿದ್ದರೆ ಆರೆಂಜ್ ಅಲರ್ಟ್ ಎಂದು ಪ್ರಕಟಿಸಲಾಗುತ್ತದೆ. 204.5 ಮಿ.ಮೀಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ.

Advertisement
Advertisement