ರಾಜಣ್ಣ ಸೇರಿದಂತೆ ಮೂವರಿಗೆ ಇಂದು ಬೆಳಗ್ಗೆಯಿಂದ ಇಡಿ ಡ್ರಿಲ್

ನವದೆಹಲಿ: ಡಿ.ಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ವಿಚಾರಣೆ ತೀವ್ರವಾಗಿದೆ. ಇಂದು ಪ್ರಕರಣ ಸಂಬಂಧ ಮೂರು ಮಂದಿಯನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಸಂಸದ ಡಿ.ಕೆ ಸುರೇಶ್, ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ಡಿ.ಕೆ ಶಿವಕುಮಾರ್ ಆಪ್ತ ಶರ್ಮಾ ಟ್ರಾವೆಲ್ಸ್ ಮಾಲೀಕ ಸುನೀಲ್ ಕುಮಾರ್ ಶರ್ಮಾ ಅವರನ್ನು ವಿಚಾರಣೆ ಒಳಪಡಿಸಲಾಗಿದೆ. ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ಆಗಮಿಸಿದ ಮೂರು ಮಂದಿ ಸಂಜೆ ಆರೂವರೆ ಗಂಟೆಯವರೆಗೂ ವಿಚಾರಣೆ ಎದುರಿಸಿದರು.

ಕೆ.ಎನ್ ರಾಜಣ್ಣ ಅವರನ್ನು ವಿಚಾರಣೆ ಕರೆಸಿದ್ದ ಇಡಿ ಅಧಿಕಾರಿಗಳು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಪೆಕ್ಸ್ ಬ್ಯಾಂಕ್ ಗಳಿಂದ ಸಾಲ ನೀಡಿರುವ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಅಪೆಕ್ಸ್ ಬ್ಯಾಂಕ್‍ಗಳು ಅಡಿ 300 ಕೋಟಿ ಹಾಗೂ ತುಮಕೂರು ಡಿಸಿಸಿ ಬ್ಯಾಂಕ್ ನಿಂದ 25 ಕೋಟಿ ಹಣ ಸಾಲ ನೀಡಿದ್ದು ಹೇಗೆ ಎನ್ನುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.

ಹರ್ಷಾ ಶುಗರ್ಸ್ ಹೂಡಿಕೆಯಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಹಣ ವರ್ಗಾವಣೆಯಾಗಿರುವ ಅನುಮಾನ ವ್ಯಕ್ತಪಡಿಸಿರುವ ಇಡಿ ಅಧಿಕಾರಿಗಳು ಬ್ಯಾಂಕ್ ವಹಿವಾಟುಗಳ ಬಗ್ಗೆ ರಾಜಣ್ಣ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸುನೀಲ್ ಕುಮಾರ್ ಶರ್ಮಾ ಅವರನ್ನು ಐದನೇ ಬಾರಿ ವಿಚಾರಣೆ ನಡೆಸಿರುವ ಇಡಿ ದೆಹಲಿಯ ಸಫರ್ ಜಂಗ್ ನಿವಾಸದಲ್ಲಿ ಸಿಕ್ಕ ಹಣ ಸೇರಿದಂತೆ ಡಿ.ಕೆ ಶಿವಕುಮಾರ್ ಹಣ ವಹಿವಾಟುಗಳ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಸಹೋದರ ಸಂಸದ ಡಿ.ಕೆ ಸುರೇಶ್ ಅವರನ್ನು ಎರಡನೇ ಬಾರಿಗೆ ವಿಚಾರಣೆ ಕರೆದಿದ್ದ ಇಡಿ ಇಂದು ಸುದೀರ್ಘ ವಿಚಾರಣೆ ನಡೆಸಿದೆ.

Leave a Reply

Your email address will not be published. Required fields are marked *