-ಭೋಟೆಕೋಶಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ, ಮತ್ತೆ ಪ್ರವಾಹದ ಎಚ್ಚರಿಕೆ
-13 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ
-28 ಮಂದಿ ಕನ್ನಡಿಗರು ನಾಪತ್ತೆ, ಸಿಗುತ್ತಿಲ್ಲ ಸಂಪರ್ಕ
ಕಠ್ಮಂಡು: ನೇಪಾಳ-ಟಿಬೆಟ್ ಗಡಿ ಪ್ರದೇಶದ ಭೋಟೆಕೋಶಿ ನದಿಯಲ್ಲಿ ಆ.26ರಂದು ಸಂಭವಿಸಿದ ಭೀಕರ ಹಠಾತ್ ಪ್ರವಾಹ (Flood) ಭಾರಿ ಅನಾಹುತವನ್ನೇ ಸೃಷ್ಟಿಸಿದೆ. ಸಾವಿನ ಸಂಖ್ಯೆ 903ಕ್ಕೆ ಏರಿಕೆಯಾಗಿದ್ದು, 4 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಕಣ್ಮರೆಯಾದ 4000ಕ್ಕೂ ಅಧಿಕ ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮಾಹಿತಿಯ ಪ್ರಕಾರ, ಒಟ್ಟು 903 ಮೃತರ ಪೈಕಿ ಚಿತ್ವಾನ್‌ನಲ್ಲಿ 272, ನವಾಲ್‌ಪರಾಸಿ ಪೂರ್ವದಲ್ಲಿ 207, ನವಾಲ್‌ಪರಾಸಿ ಪಶ್ಚಿಮದಲ್ಲಿ 151 ಮತ್ತು ಗೋರ್ಖಾ ಜಿಲ್ಲೆಗಳಲ್ಲಿ 62 ಶವಗಳನ್ನು ಹೊರತೆಗೆಯಲಾಗಿದೆ. ಇದರೊಂದಿಗೆ ನುವಾಕೋಟ್‌ನಲ್ಲಿ 95, ಧಾಡಿಂಗ್‌ನಲ್ಲಿ 55, ತನಾಹುವಿನಲ್ಲಿ 37 ಮತ್ತು ರಸುವಾದಲ್ಲಿ 24 ಶವಗಳು ಪತ್ತೆಯಾಗಿವೆ. ಇದನ್ನೂ ಓದಿ: ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ; ಸಾವಿನ ಸಂಖ್ಯೆ 788ಕ್ಕೆ ಏರಿಕೆ, 2,500ಕ್ಕೂ ಹೆಚ್ಚು ನಾಪತ್ತೆ
ಪರಿಸ್ಥಿತಿ ಗಂಭೀರವಾಗಿದ್ದು, ಮತ್ತೆ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಪೀಡಿತ ಪ್ರದೇಶಗಳ ಜನರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಭಾನುವಾರ (ಆ.30) ಭೋಟೆಕೋಶಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಜನರಿಗೆ ಎಚ್ಚರಿಕೆ ನೀಡಲು ಮೊಬೈಲ್‌ಗಳಿಗೆ ಸಂದೇಶ ಕಳುಹಿಸಲಾಗಿದೆ. ಜೊತೆಗೆ ತ್ರಿಶೂಲಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಗೋರ್ಖಾ ಜಿಲ್ಲೆಯ ಗಂಡಕಿ ಪ್ರಾಂತ್ಯದಲ್ಲಿ ತೂಗುಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ. ಪರಿಣಾಮ ಇದರಿಂದ ಸುಮಾರು 400 ಕುಟುಂಬಗಳು ಪ್ರಮುಖ ಹೆದ್ದಾರಿಯ ಸಂಪರ್ಕದಿಂದ ದೂರವಾಗಿವೆ ಎಂದು ವರದಿಯಾಗಿದೆ.
933 ಜಲವಿದ್ಯುತ್ ಸಿಬ್ಬಂದಿ ಸುರಂಗಗಳಲ್ಲಿ ಸಿಲುಕಿರುವ ಶಂಕೆ:
ಪ್ರವಾಹದಿಂದ ಜಲವಿದ್ಯುತ್ ಯೋಜನೆಗಳಿಗೂ ಭಾರಿ ಹಾನಿಯಾಗಿದ್ದು, 933 ಮಂದಿ ಜಲವಿದ್ಯುತ್ ಯೋಜನೆಗಳ ಸಿಬ್ಬಂದಿ ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಪ್ರಾಧಿಕಾರ ತಿಳಿಸಿದೆ. ಸುರಂಗಗಳಲ್ಲಿ ಸಿಲುಕಿರುವವರನ್ನು ರಕ್ಷಿಸಲು ವಿಶೇಷ ಕಾರ್ಯಾಚರಣೆ ಮುಂದುವರಿದಿದೆ.ಇದನ್ನೂ ಓದಿ: ನೇಪಾಳ ಬೆನ್ನಲ್ಲೇ ಅಮೆರಿಕದಲ್ಲೂ ಭೀಕರ ಪ್ರವಾಹ; 20 ಮಂದಿ ನಾಪತ್ತೆ
ಭೋಟೆಕೋಶಿ ನದಿಯಲ್ಲಿ ಭಾರಿ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ಸಂಗ್ರಹವಾಗಿರುವುದರಿಂದ ನೈಸರ್ಗಿಕ ಅಣೆಕಟ್ಟಿನಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಡೆದರೆ ಮತ್ತೊಮ್ಮೆ ಭಾರಿ ಪ್ರವಾಹ ಸಂಭವಿಸುವ ಆತಂಕ ಎದುರಾಗಿದೆ. ಟಿಬೆಟ್‌ನಲ್ಲಿಯೂ ಇದೇ ರೀತಿಯ ನೈಸರ್ಗಿಕ ಸರೋವರ ನಿರ್ಮಾಣವಾಗಿದ್ದು, ಅದು ಒಡೆದರೆ ಹೆಚ್ಚುವರಿ ನೀರು ನೇಪಾಳದ ನದಿ ವ್ಯವಸ್ಥೆಗೆ ಹರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದರಿಂದ ರಕ್ಷಣಾ ಕಾರ್ಯಾಚರಣೆಯೂ ಮತ್ತಷ್ಟು ಸವಾಲಿನದ್ದಾಗಲಿದೆ.
28 ಮಂದಿ ಕನ್ನಡಿಗರು ನಾಪತ್ತೆ, ಸಿಗುತ್ತಿಲ್ಲ ಸಂಪರ್ಕ:
ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ 13 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸಿಲುಕಿರುವವರನ್ನು ಸ್ಥಳಾಂತರಿಸುವುದು, ಆಹಾರ, ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಖಾಸಗಿ ಹೆಲಿಕಾಪ್ಟರ್‌ಗಳನ್ನೂ ಕಾರ್ಯಾಚರಣೆಗೆ ಸೇರಿಸಲಾಗಿದ್ದು, ಪರಿಹಾರ ಸಾಮಗ್ರಿ ಸಾಗಿಸಲು ಹಲವು ಚಾರ್ಟರ್ ವಿಮಾನಗಳ ಸೇವೆ ಪಡೆಯಲಾಗಿದೆ.ಇದನ್ನೂ ಓದಿ: ನೇಪಾಳ ಭೀಕರ ಪ್ರವಾಹ | ಸಾವಿನ ದವಡೆಯಿಂದ 1,643 ಮಕ್ಕಳನ್ನು ರಕ್ಷಿಸಿದ ಹೀರೋ
ಭಾರತವೂ ನೇಪಾಳದ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ನೆರವು ನೀಡುತ್ತಿದ್ದು, ಭಾರತೀಯ ನಾಗರಿಕರ ಸುರಕ್ಷಿತ ವಾಪಸಾತಿ ಸೇರಿದಂತೆ ವಿವಿಧ ರೀತಿಯ ನೆರವು ಮುಂದುವರಿಸಿದೆ. ಆಗಸ್ಟ್ 30ರ ವೇಳೆಗೆ 149 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ 28 ಮಂದಿ ಕನ್ನಡಿಗರು ಇನ್ನು ನಾಪತ್ತೆಯಾಗಿದ್ದು ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶವಾಗಾರಗಳಲ್ಲಿ ಜಾಗದ ಕೊರತೆ:
ಮೃತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ ನೇಪಾಳದಲ್ಲಿ ಶವಾಗಾರಗಳಲ್ಲಿ ಜಾಗದ ಕೊರತೆ ಉಂಟಾಗಿದೆ. ಮೃತರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ ನಂತರ, ಗುರುತಿಸಲಾಗದ ಮತ್ತು ವಾರಸುದಾರರಿಲ್ಲದ ಶವಗಳನ್ನು ಅಂತ್ಯಸಂಸ್ಕಾರ ಮಾಡಲು ಅಧಿಕಾರಿಗಳು ಈಗ ನಿರ್ಧರಿಸಿದ್ದಾರೆ.ಇದನ್ನೂ ಓದಿ: ನೇಪಾಳದಲ್ಲಿ ವಿನಾಶಕಾರಿ ಪ್ರವಾಹ – 700ರ ಗಡಿ ದಾಟಿದ ಸಾವಿನ ಸಂಖ್ಯೆ; 2,500 ಮಂದಿ ಇನ್ನೂ ಕಣ್ಮರೆ
