– ಕಾಲ್ನಡಿಗೆಯಲ್ಲೇ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ಶಿಕ್ಷಕ
ಕಠ್ಮಂಡು: ನೇಪಾಳದ (Nepal) ನುವಕೋಟ್‌ನಲ್ಲಿರುವ ಶಾಲೆಯ ಪ್ರಾಂಶುಪಾಲರೊಬ್ಬರು ಭೀಕರ ಪ್ರವಾಹದ (Nepal Flood) ವಿಚಾರ ತಿಳಿಯುತ್ತಿದ್ದಂತೆ ಶಾಲೆಯಲ್ಲಿದ್ದ 1,643 ಮಕ್ಕಳನ್ನು ಕಾಲ್ನಡಿಗೆಯಲ್ಲೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ರಕ್ಷಿಸಿದ್ದಾರೆ.
ಬುಧವಾರ (ಆ.26) ಬೆಳಿಗ್ಗೆ 9:20ಕ್ಕೆ ಸ್ನೇಹಿತರೊಬ್ಬರು ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ಶಾಲೆಯ ಪ್ರಾಂಶುಪಾಲ ರಾಜೇಂದ್ರ ದಾವಾಡಿ (Rajendra Dawadi) ಅವರಿಗೆ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿದ್ದರು. ದಾವಾಡಿಯವರು ಆರಂಭದಲ್ಲಿ ಶಾಲೆ ಸುರಕ್ಷಿತವಾಗಿದೆ ಎಂದು ಭಾವಿಸಿದ್ದರು. ಆದರೆ ನೀರು ಏರುತ್ತಿರುವುದು ಗೊತ್ತಾಗುತ್ತಿದ್ದಂತೆ ಶಾಲೆಯ ಗಂಟೆ ಬಾರಿಸಿ ಶಿಕ್ಷಕರಿಗೆ ತರಗತಿ ಕೊಠಡಿಗಳನ್ನು ಖಾಲಿ ಮಾಡುವಂತೆ ಆದೇಶಿಸಿದರು. ಬಳಿಕ ಶಾಲಾ ಬಸ್‌ಗಳಲ್ಲಿ ಮಕ್ಕಳನ್ನು ಕರೆದೊಯ್ಯಲಾಯಿತು. ಆದರೆ ಆಗಲೇ ನೀರಿನ ಮಟ್ಟ ಏರಿದ್ದರಿಂದ ಬಸ್ ಸೇತುವೆ ದಾಟಲು ಸಾಧ್ಯವಾಗದೇ ಇರುವುದನ್ನು ಗಮನಿಸಿದರು. ಇದನ್ನೂ ಓದಿ: ನೇಪಾಳದಲ್ಲಿ ವಿನಾಶಕಾರಿ ಪ್ರವಾಹ – 700ರ ಗಡಿ ದಾಟಿದ ಸಾವಿನ ಸಂಖ್ಯೆ; 2,500 ಮಂದಿ ಇನ್ನೂ ಕಣ್ಮರೆ
ಈ ವೇಳೆ ಭಯದಿಂದ ಕುಸಿದುಬಿದ್ದ ವಿದ್ಯಾರ್ಥಿನಿಯನ್ನು ದಾವಡಿ ತಮ್ಮ ಬೈಕ್‌ನಲ್ಲಿ ಕರೆದೊಯ್ದರು. ಆಗ ಉಳಿದ ಮಕ್ಕಳು ಕಾಲ್ನಡಿಗೆಯಲ್ಲೇ ಬೈಕ್‌ನ್ನು ಹಿಂಬಾಲಿಸಿದರು. ಅಂತಿಮವಾಗಿ ಶಾಲೆಗೆ ನೀರು ನುಗ್ಗಿ ಕೊಚ್ಚಿಕೊಂಡು ಹೋಗುವಾಗ ಮಕ್ಕಳು ಅರಳಿ ಮರವೊಂದರ ಅಡಿ ಸುರಕ್ಷಿತವಾಗಿ, ಆಶ್ರಯ ಪಡೆದಿದ್ದರು. ದಾವಡಿಯವರ ಈ ತ್ವರಿತ ಕ್ರಮದಿಂದ 1,643 ಮಕ್ಕಳ ಜೀವ ಉಳಿಯಿತು.
ದಾವಡಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಉಳಿಸಿದ್ದಕ್ಕಾಗಿ ಸ್ಥಳೀಯರು ದಾವಾಡಿಯನ್ನು ಹೀರೋ ಎಂದು ಕರೆದಿದ್ದಾರೆ.
ನೇಪಾಳದ ಭೀಕರ ಪ್ರವಾಹದಿಂದಾಗಿ ಹಲವು ಕಟ್ಟಡಗಳು, ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳು ಕೊಚ್ಚಿಹೋಗಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸಾವಿನ ಸಂಖ್ಯೆ 700ರ ಗಡಿ ದಾಟಿದೆ. ಸುಮಾರು 2,498 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದ ಕಂತೆ ಕಂತೆ ನೋಟು ತುಂಬಿದ್ದ ಬ್ಯಾಂಕ್ ಲಾಕರ್; ಹಣ ದೋಚಿದ್ದ 29 ಮಂದಿ ಅರೆಸ್ಟ್
