ಕಠ್ಮಂಡು: ನೇಪಾಳದಲ್ಲಿ (Nepal Floods) ವಿನಾಶಕಾರಿ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಕಂತೆ ಕಂತೆ ನೋಟು ತುಂಬಿದ್ದ ಬ್ಯಾಂಕ್ ಲಾಕರ್ ಅನ್ನು ದೋಚಿದ್ದ 29 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಪಾರ ಪ್ರಮಾಣದ ಹಣ ತುಂಬಿದ್ದ ತಿಜೋರಿಯು ಭೋಟೆಕೋಶಿ (Bhotekoshi) ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿತ್ತು. ನಂತರ ತಿಜೋರಿ ಧಾಡಿಂಗ್‌ನ ಗಾಲ್ಚಿ ಗ್ರಾಮೀಣ ಪುರಸಭೆ-4ರ ಬೆಲ್ಖುಖೋಲಾ ಬಳಿಯ ತ್ರಿಶೂಲಿ ನದಿಯ ದಡದಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ತಿಜೋರಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದರು. ಇದನ್ನೂ ಓದಿ: Public TV Explainer | ನೇಪಾಳ ಪ್ರವಾಹದಿಂದ ಭಾರತಕ್ಕೆ ಹೆಚ್ಚಿದ ಆತಂಕ – ಹಿಮಾಲಯದ 200 ಸರೋವರಗಳಿಗೆ ಅಪಾಯ!
ಘಟನಾ ಸ್ಥಳಕ್ಕೆ ಪೊಲೀಸ್ ತಂಡವನ್ನು ತಕ್ಷಣವೇ ಕಳುಹಿಸಲಾಯಿತು. ಶೋಧ ಕಾರ್ಯಾಚರಣೆ ವೇಳೆ 29 ಜನರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ 92,68,505 ನೇಪಾಳಿ ರೂಪಾಯಿಗಳನ್ನು (ಸುಮಾರು 57 ಲಕ್ಷ ರೂ.) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಹೆಚ್ಚಿನವರು ಗಲ್ಚಿ-4 ರ ಮಸ್ತಾರ್ ನಿವಾಸಿಗಳು. ಕೆಲವರು ಗಲ್ಚಿ-6 ರ ಆದಮ್‌ಘಾಟ್ ಮತ್ತು ಸಿದ್ಧಲೆಕ್-7 ರ ಆದಮ್‌ತಾರ್‌ನವರಾಗಿದ್ದಾರೆ. ಇತರರು ಮೂಲತಃ ಚಿಟ್ವಾನ್ ಮತ್ತು ಪಾರ್ಸಾಗೆ ಸೇರಿದವರಾಗಿದ್ದು, ಪ್ರಸ್ತುತ ಧಾಡಿಂಗ್‌ನಲ್ಲಿ ವಾಸಿಸುತ್ತಿದ್ದಾರೆ. ಬಂಧಿತರು 19 ರಿಂದ 49 ವರ್ಷ ವಯಸ್ಸಿನವರು.
ವಶಪಡಿಸಿಕೊಂಡ ನಗದು ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಹೆಚ್ಚುವರಿ ಶಂಕಿತರು ಭಾಗಿಯಾಗಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ವಿನಾಶಕಾರಿ ಪ್ರವಾಹ, ನೇಪಾಳದಲ್ಲಿ ಏರುತ್ತಲಿದೆ ಸಾವಿನ ಸಂಖ್ಯೆ – 626 ಮಂದಿ ಬಲಿ, 2,400ಕ್ಕೂ ಹೆಚ್ಚು ಜನ ನಾಪತ್ತೆ
ಮೃತ ಮಹಿಳೆಯಿಂದ ಚಿನ್ನದ ಕಿವಿಯೋಲೆ ಕಳ್ಳತನ
ರಣಭೀಕರ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದ ಮಹಿಳೆಯ ಚಿನ್ನದ ಕಿವಿಯೋಲೆಯನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಮೃತದೇಹದಿಂದ ಚಿನ್ನದ ಕಿವಿಯೋಲೆ ತೆಗೆದುಕೊಳ್ಳುತ್ತಿದ್ದ ದೃಶ್ಯದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಮೃತರ ಸಂಖ್ಯೆ 626 ಕ್ಕೆ ಏರಿಕೆ
ನೇಪಾಳದ ವಿಪತ್ತು ಪ್ರಾಧಿಕಾರವು ಶನಿವಾರ ವಿನಾಶಕಾರಿ ಪ್ರವಾಹದ ಅಂಕಿಅಂಶಗಳನ್ನು ಪರಿಷ್ಕರಿಸಿದೆ. 2,426 ಜನರು ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ 626 ಕ್ಕೆ ಏರಿದೆ ಎಂದು ಹೇಳಿದೆ. ದೇಶದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾದ ಮೂರು ದಿನಗಳ ನಂತರ ಪರಿಷ್ಕೃತ ಅಂಕಿಅಂಶಗಳು ಹೊರಬಿದ್ದಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ.
