-ನೇಪಾಳಕ್ಕೆ ಬಂದಿಳಿದ 11 ಸದಸ್ಯರ ಭಾರತೀಯ ತಂಡ
ಕಠ್ಮಂಡು: ನೇಪಾಳ-ಚೀನಾ (Nepal-China) ಗಡಿಯ ಸಮೀಪದ ಹಿಮನದಿ ಕುಸಿದು ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಬಲಿಯಾದವರ ಸಂಖ್ಯೆ 626ಕ್ಕೆ ಏರಿಕೆಯಾಗಿದೆ. ಈಗಾಗಲೇ 4,400ಕ್ಕೂ ಅಧಿಕ ಜನರನ್ನು ರಕ್ಷಣೆ ಮಾಡಲಾಗಿದ್ದು, 2,400ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.
ಹಿಮನದಿ ಕುಸಿದು ಲ್ಹೆಂಡೆ ಖೋಲಾ ನದಿಗೆ ಭಾರಿ ಪ್ರಮಾಣದ ಮಂಜುಗಡ್ಡೆ, ಬಂಡೆಗಳು ಹರಿದು ಬಂದು ಭೋಟೆ ಕೋಶಿ ನದಿಗೆ ನೀರು ನುಗ್ಗಿದೆ. ಪರಿಣಾಮ ರಸುವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಾನಿಯನ್ನುಂಟು ಮಾಡಿದೆ. ಈವರೆಗೂ ದುರಂತದಲ್ಲಿ 626 ಮಂದಿ ಸಾವನ್ನಪ್ಪಿದ್ದಾರೆ ಎಂದು ನೇಪಾಳ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೇಪಾಳಕ್ಕೆ ಮತ್ತೊಂದು ಮಹಾ ಅಪಾಯ! – ಯಾವ್ದೇ ಕ್ಷಣದಲ್ಲಾದ್ರೂ ಸ್ಫೋಟಿಸಬಹುದು ಸರೋವರ: ಚೀನಾ ಮತ್ತೆ ಎಚ್ಚರಿಕೆ
ಇನ್ನೂ ಇದೇ ಪ್ರವಾಹದಿಂದಾಗಿ ಚೀನಾದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೇ ಟಿಬೆಟ್ ಹಾಗೂ ನೇಪಾಳದಲ್ಲಿ ಸುಮಾರು 2,500ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿರುವ ಹಿನ್ನೆಲೆ, ಇಲ್ಲಿನ ಸರ್ಕಾರದ ಮನವಿಯ ಮೇರೆಗೆ ವೈದ್ಯಕೀಯ ಸಿಬ್ಬಂದಿ ಮತ್ತು ಸುರಂಗ ರಕ್ಷಣಾ ತಜ್ಞರನ್ನು ಒಳಗೊಂಡ 11 ಸದಸ್ಯರ ಭಾರತೀಯ ತಂಡವು ಶನಿವಾರ (ಆ.29) ನೇಪಾಳಕ್ಕೆ ತಲುಪಿದೆ. ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡಲು ಈ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದೆ.

ಬುಧವಾರ (ಆ.26) ಸಂಭವಿಸಿದ ಈ ಪ್ರವಾಹದಿಂದ ರಸುವಾ ಮತ್ತು ಮಧ್ಯ ನೇಪಾಳದ ಇತರ ಭಾಗಗಳಲ್ಲಿ ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಇದರ ನಡುವೆಯೂ ರಕ್ಷಣಾ ತಂಡಗಳು ನಾಪತ್ತೆಯಾಗಿರುವವರ ಹುಡುಕಾಟವನ್ನು ಮುಂದುವರೆಸಿವೆ.ಇದನ್ನೂ ಓದಿ: ವಿನಾಶಕಾರಿ ಹಠಾತ್ ಪ್ರವಾಹಕ್ಕೆ 550ಕ್ಕೂ ಹೆಚ್ಚು ಮಂದಿ ಬಲಿ – ಕೊನೆಗೂ ವಿದೇಶಿ ನೆರವು ಪಡೆಯಲು ಒಪ್ಪಿದ ನೇಪಾಳ
ನಿಲುವು ಬದಲಿಸಿ ನೆರವಿಗೆ ಒಪ್ಪಿದ ನೇಪಾಳ:
ನೂರಾರು ಜನರನ್ನು ಬಲಿಪಡೆದ ಪ್ರವಾಹದ ದುರಂತದ ನಂತರವೂ ವಿದೇಶಿ ನೆರವನ್ನು ಸ್ವೀಕರಿಸಲು ಶುಕ್ರವಾರ (ಆ.28) ನೇಪಾಳ ಸರ್ಕಾರ ಹಿಂದೇಟು ಹಾಕಿತ್ತು. ಈ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ. ವಿದೇಶಗಳ ಸಹಾಯದ ಅಗತ್ಯ ಇಲ್ಲ. ಆದರೆ ಸದ್ಯಕ್ಕೆ ಸಹಾಯ ಬೇಡ, ಸಾಧ್ಯವಾದರೆ ಹಣಕಾಸಿನ ನೆರವು ನೀಡಿ ಎಂದಿತ್ತು. ಪ್ರವಾಹ ದುರಂತದ ಬಳಿಕ ತಮ್ಮ ದೇಶದ ನಾಗರಿಕರು ನಾಪತ್ತೆಯಾಗಿರುವ ರಾಷ್ಟ್ರಗಳ ಒತ್ತಡದಿಂದಾಗಿ ನೇಪಾಳ ಈ ಯು-ಟರ್ನ್ ತೆಗೆದುಕೊಂಡಿದ್ದು, ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಮತ್ತು ಫೋರೆನ್ಸಿಕ್ ತಪಾಸಣೆ ನಡೆಸಲು ಭಾರತ, ಚೀನಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದ ತಂಡಗಳಿಗೆ ಹಾಗೂ ತಜ್ಞರಿಗೆ ಅವಕಾಶ ನೀಡಿದೆ.

ಇದರ ನಡುವೆ, ನೇಪಾಳದ ವಿನಂತಿಯ ಮೇರೆಗೆ ಭಾರತ ಸರ್ಕಾರ ವೈದ್ಯಕೀಯ ನೆರವು, ಎಂಜಿನಿಯರಿಂಗ್ ತಂಡಗಳನ್ನು ಕಳುಹಿಸಲು ಮತ್ತು ಹಾನಿಗೊಳಗಾದ ಮೂಲಸೌಕರ್ಯವನ್ನು ಪುನಃಸ್ಥಾಪನೆಗೆ ಸಹಾಯ ಮಾಡಲು ಮುಂದಾಗಿದೆ. ಹೆಚ್ಚುವರಿ ಮಾನವೀಯ ಸಹಾಯಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈಗಾಗಲೇ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತದ ಎರಡು ವಿಮಾನಗಳು ನೇಪಾಳಕ್ಕೆ ತಲುಪಿವೆ. ಇನ್ನೊಂದು ವಿಮಾನ ಶೀಘ್ರದಲ್ಲೇ ನೇಪಾಳಕ್ಕೆ ತಲುಪಲಿದೆ. ಇದರೊಂದಿಗೆ ಸುರಂಗ ರಕ್ಷಣಾ ತಂಡವನ್ನು ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಮೊದಲು ಒಂದು ಪರಿಶೀಲನಾ ತಂಡವನ್ನು ಕಳುಹಿಸಲಾಗುತ್ತಿದೆ. ವೈದ್ಯಕೀಯ ತಂಡವನ್ನು ಸಹ ಕಳುಹಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
