– ನೀರು ಕಪ್ಪಾಗ್ತಿದೆ, ಅಪಾಯ ಹೆಚ್ಚಾಗ್ತಿದೆ; ಒಡೆದರೆ ನದಿಗೆ ಸೆಕೆಂಡಿಗೆ 500 ಕ್ಯುಬಿಕ್ ಮೀಟರ್ ನೀರು ಹರಿಯೋ ಸಾಧ್ಯತೆ
ಕಠ್ಮಂಡು: ವಿನಾಶಕಾರಿ ಹಠಾತ್ ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಚೀನಾ (China) ಮತ್ತೊಂದು ಎಚ್ಚರಿಕೆ ನೀಡಿದೆ. ಲ್ಹೆಂಡೆ ನದಿ ದಂಡೆಯ ಮೇಲ್ಭಾಗದಲ್ಲಿ ರೂಪುಗೊಂಡಿರುವ ಬ್ಯಾರಿಯರ್ ಲೇಕ್ (Barrier Lake) (ನೈಸರ್ಗಿಕವಾಗಿ ರೂಪುಗೊಂಡ ಸರೋವರ) ಯಾವ ಕ್ಷಣದಲ್ಲಾದರೂ ಒಡೆದುಹೋಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಸರೋವರದ ನೀರಿನ ಬಣ್ಣ ನಿರಂತರವಾಗಿ ಗಾಢವಾಗುತ್ತಿದೆ, ಇದು ಅಪಾಯ ಹೆಚ್ಚುತ್ತಿರುವ ಸೂಚನೆಯಾಗಿರಬಹುದು. ಒಂದು ವೇಳೆ ಸರೋವರೆ ಒಡೆದರೆ ನದಿಗೆ ಹರಿಯುವ ನೀರಿನ ಪ್ರಮಾಣ 1 ಸೆಕೆಂಡಿಗೆ 500 ಕ್ಯುಬಿಕ್ ಮೀಟರ್ ನಷ್ಟಿರಲಿದೆ. ಆದಾಗ್ಯೂ ದೊಡ್ಡ ಪ್ರಮಾಣದ ಪ್ರವಾಹ (Flood) ಉಂಟಾಗುವ ಸಾಧ್ಯತೆ ಕಡಿಮೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ (Nepal) ವಿದೇಶಾಂಗ ಸಚಿವಾಲಯದೊಂದಿಗೆ ಹಂಚಿಕೊಂಡ ಸಂದೇಶದಲ್ಲಿ ಚೀನಾದ ಅಧಿಕಾರಿಗಳು, ʻʻಎರಡು ದಿನಗಳ ಹಿಂದೆ ರೂಪುಗೊಳ್ಳಲು ಆರಂಭಿಸಿದ ಸರೋವರದ ನೀರಿನ ಬಣ್ಣ ನಿರಂತರವಾಗಿ ಗಾಢವಾಗುತ್ತಿದೆ. ಇದು ಸರೋವರ ಯಾವ ಕ್ಷಣದಲ್ಲಾದರೂ ಒಡೆಯಬಹುದು ಎಂಬುದನ್ನು ಸೂಚಿಸುತ್ತದೆ” ಎಂದು ತಿಳಿಸಿದ್ದಾರೆ.
ನೀರಿನ ಪ್ರಮಾಣ ದೊಡ್ಡದಾಗಿಲ್ಲದ ಕಾರಣ ಕೆಳಭಾಗದ ನದಿಗಳಲ್ಲಿ ನೀರಿನ ಹರಿವು ಸ್ವಲ್ಪ ಹೆಚ್ಚಾಗಬಹುದು. ಆದರೆ, ಗಮನಾರ್ಹ ಪ್ರಮಾಣದಲ್ಲಿ ನೀರು ಏರಿಕೆಯಾಗುವ ಸಾಧ್ಯತೆ ಇಲ್ಲ. ಆದರೂ ನದಿಯ ಕೆಳಭಾಗದಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
ಹಿಮನದಿ ಕುಸಿತದಿಂದಲೇ ಸರೋವರ ರಚನೆ
ನೇಪಾಳ ಮತ್ತು ಟಿಬೆಟ್ ಪ್ರದೇಶಗಳಲ್ಲಿ ಭೀಕರ ಹಠಾತ್ ಪ್ರವಾಹಕ್ಕೆ ಕಾರಣವಾದ ಹಿಮನದಿ ಕುಸಿತದ ಬಳಿಕ ಈ ತಾತ್ಕಾಲಿಕ ಸರೋವರ ರೂಪುಗೊಂಡಿದೆ. ಹಿಮನದಿ ಕುಸಿತದಿಂದ ಕೆಳಕ್ಕೆ ಹರಿದು ಬಂದ ಅವಶೇಷಗಳಿಂದ ನೈಸರ್ಗಿಕ ಅಣೆಕಟ್ಟು ನಿರ್ಮಾಣವಾಗಿದ್ದು, ಅದರ ಪರಿಣಾಮವಾಗಿ ಸರೋವರ ಸೃಷ್ಟಿಯಾಗಿದೆ. ಚೀನಾದ ಭಾಗದಲ್ಲಿರುವ ಚೋಚೆನ್ ನದಿ ಹಾಗೂ ನೇಪಾಳದ ಭಾಗದಲ್ಲಿರುವ ಪುರೇಪು ನದಿ ಸೇರುವ ಪ್ರದೇಶದ ಸಮೀಪ ಈ ಸರೋವರ ನಿರ್ಮಾಣವಾಗಿದೆ.
ಚೀನಾದ ಜಲಸಂಪನ್ಮೂಲ ಸಚಿವಾಲಯದ ಪ್ರಕಾರ, ಸರೋವರದ ನೀರಿನ ಮಟ್ಟ ನಿಧಾನವಾಗಿ ಏರುತ್ತಿದೆ. ಶುಕ್ರವಾರದ ವೇಳೆಗೆ ಸರೋವರದಲ್ಲಿ ಸುಮಾರು 25 ಲಕ್ಷ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಿತ್ತು.
ಸರೋವರ ಒಡೆದರೆ ಏನಾಗಬಹುದು?
ಸರೋವರ ಒಡೆದ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರವಾಹದ ಪರಿಣಾಮವನ್ನು ಅಂದಾಜಿಸಲು ಚೀನಾ ಈಗಾಗಲೇ ಫ್ಲಡ್ ಮಾಡೆಲಿಂಗ್ ನಡೆಸಿದೆ.
ಚೀನಾದ ಅಂದಾಜಿನ ಪ್ರಕಾರ, ನೈಸರ್ಗಿಕ ಅಣೆಕಟ್ಟಿನ ಒಂದು ಭಾಗ ಒಡೆದರೆ ನದಿ ವ್ಯವಸ್ಥೆಗೆ ಹರಿಯುವ ನೀರಿನ ಗರಿಷ್ಠ ಪ್ರಮಾಣ ಸೆಕೆಂಡಿಗೆ 500 ಕ್ಯುಬಿಕ್ ಮೀಟರ್ ತಲುಪಬಹುದು. ಆದರೆ ಈ ನೀರು ನದಿಯ ದಡಗಳ ಒಳಗೇ ಹರಿಯುವ ಸಾಧ್ಯತೆ ಹೆಚ್ಚಿದ್ದು, ಭಾರೀ ಪ್ರಮಾಣದ ನೀರು ನದಿಯ ದಡಗಳನ್ನು ಮೀರುವ ಸಾಧ್ಯತೆ ಕಡಿಮೆ ಎಂದು ಚೀನಾದ ಸಂದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಚೀನಾ, ಮುಂದಿನ ಮೂರು ದಿನಗಳಲ್ಲಿ ಸರೋವರಕ್ಕೆ ಇನ್ನೂ 30 ಲಕ್ಷ ಕ್ಯುಬಿಕ್ ಮೀಟರ್ ನೀರು ಸೇರುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು.
ಡ್ರೋನ್, ಉಪಗ್ರಹಗಳಿಂದ ನಿರಂತರ ನಿಗಾ
ಅಪಾಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚೀನಾ ಈ ಪ್ರದೇಶದ ಮೇಲೆ ನಿರಂತರ ನಿಗಾ ಇರಿಸಿದೆ. ಡ್ರೋನ್‌ಗಳು ಹಾಗೂ ಉಪಗ್ರಹಗಳ ಮೂಲಕ ಸರೋವರ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
