– ನೂರಾರು ಕಾರ್ಮಿಕರು ಸುರಂಗದಲ್ಲಿ ಸಿಲುಕಿರುವ ಆತಂಕ
– ಭಾರತ, ಚೀನಾದಿಂದಲೂ ನೆರವು
ಕಠ್ಮಂಡು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ (Nepal Flood) ಸಾವಿನ ಸಂಖ್ಯೆ 788ಕ್ಕೆ ಏರಿಕೆಯಾಗಿದ್ದು, 2,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರವಾಹದ ರಭಸಕ್ಕೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜಲವಿದ್ಯುತ್ ಯೋಜನೆಗಳಿಗೂ ಭಾರೀ ಹಾನಿಯಾಗಿದೆ. ಹಲವರು ಸುರಂಗಗಳೊಳಗೆ ಸಿಲುಕಿಕೊಂಡಿರುವ ಆತಂಕ ವ್ಯಕ್ತವಾಗಿದೆ. ಸದ್ಯ ರಕ್ಷಣಾ ಸಿಬ್ಬಂದಿ ಕೆಸರಿನಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತರಲು ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನೂರಾರು ಕಾರ್ಮಿಕರು ಸುರಂಗದಲ್ಲಿ ಸಿಲುಕಿರುವ ಆತಂಕ
ತ್ರಿಶೂಲಿ-3A ಸೇರಿದಂತೆ ಹಲವು ಜಲವಿದ್ಯುತ್ ಯೋಜನೆಗಳ ಪ್ರದೇಶಗಳಲ್ಲಿ ಪ್ರವಾಹದ ನೀರು ಮತ್ತು ಅವಶೇಷಗಳು ತುಂಬಿಕೊಂಡಿವೆ. ಸುರಂಗಗಳೊಳಗೆ ನೂರಾರು ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದ್ದು, ಅವರನ್ನು ಪತ್ತೆಹಚ್ಚಿ ರಕ್ಷಿಸಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ಇದನ್ನೂ ಓದಿ: ನೇಪಾಳದ ಹವಾಮಾನ ವೈಪರೀತ್ಯಕ್ಕೆ ಪ್ರವಾಸ ಮೊಟಕು; ನಿಪ್ಪಾಣಿಯ 21 ಪ್ರವಾಸಿಗರು ತಾಯ್ನಾಡಿಗೆ ವಾಪಸ್
ನೇಪಾಳದಲ್ಲಿ 2,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಕೆಲವು ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ, ಚೀನಾದಿಂದಲೂ ನೆರವು
ವಿಪತ್ತಿನ ಪ್ರಮಾಣ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ನೆರವು ಕೋರಿದೆ. ಭಾರೀ ಪ್ರಮಾಣದ ಅವಶೇಷಗಳನ್ನು ತೆರವುಗೊಳಿಸುವುದು ಮತ್ತು ಸುರಂಗಗಳಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಕ್ಕೆ ಭಾರತ ಹಾಗೂ ಚೀನಾದಿಂದ ವಿಶೇಷ ತಂಡಗಳು ನೆರವಾಗುತ್ತಿವೆ.
ಸುಮಾರು 10,000 ನೇಪಾಳಿ ಭದ್ರತಾ ಸಿಬ್ಬಂದಿಯನ್ನೂ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಅತ್ಯಾಧುನಿಕ ವಿಚಕ್ಷಣಾ ಉಪಕರಣಗಳು ಮತ್ತು ಸುರಂಗ ರಕ್ಷಣಾ ತಂತ್ರಜ್ಞಾನ ಬಳಸಿ ಸಿಕ್ಕಿಬಿದ್ದವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.
ಇತ್ತ ನೆರೆಯ ಟಿಬೆಟ್‌ನಲ್ಲೂ ಪ್ರವಾಹ ಮತ್ತು ಹಿಮನದಿ ಕುಸಿತದಿಂದ 16 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬದುಕುಳಿದವರನ್ನು ರಕ್ಷಿಸುವುದು ಹಾಗೂ ನಾಪತ್ತೆಯಾದವರನ್ನು ಪತ್ತೆಹಚ್ಚುವುದು ಸದ್ಯ ರಕ್ಷಣಾ ತಂಡಗಳ ಪ್ರಮುಖ ಗುರಿಯಾಗಿದೆ.ಇದನ್ನೂ ಓದಿ: ನೇಪಾಳ ಬೆನ್ನಲ್ಲೇ ಅಮೆರಿಕದಲ್ಲೂ ಭೀಕರ ಪ್ರವಾಹ; 20 ಮಂದಿ ನಾಪತ್ತೆ
