– ಮೃತದೇಹಗಳನ್ನು ಸಂಗ್ರಹಿಸಿಡಲು ಸ್ಥಳವಿಲ್ಲದೇ ಸರ್ಕಾರದ ಪರದಾಟ
ಕಠ್ಮಂಡು: ನೇಪಾಳದಲ್ಲಿ (Nepal Floods) ಅಪ್ಪಳಿಸಿದ ವಿನಾಶಕಾರಿ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 538ಕ್ಕೆ ಏರಿಕೆಯಾಗಿದೆ. ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಈ ನಡುವೆ ಮೃತದೇಹಗಳನ್ನು ಸಂಗ್ರಹಿಸಡಲು ಸ್ಥಳವಿಲ್ಲದೇ ಸರ್ಕಾರ ಪರದಾಡುವ ಸ್ಥಿತಿಗೆ ತಲುಪಿದೆ. ಈ ನಡುವೆ ಹೊಸ ಪ್ರವಾಹದ ಆತಂಕ ಜನರಲ್ಲಿ ಇನ್ನಷ್ಟು ಭೀತಿ ಹೆಚ್ಚಿಸಿದೆ.
ನೇಪಾಳದಲ್ಲಿ ಹಠಾತ್ ಸೃಷ್ಟಿಯಾದ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆಯಾಗಿದೆ. ಎಂಟು ಜಿಲ್ಲೆಗಳಿಂದ ಶವಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೇಪಾಳ ಪೊಲೀಸರ ಪ್ರಕಾರ, ನವಲ್ಪರಾಸಿ ಪೂರ್ವದಿಂದ 134, ಚಿಟ್ವಾನ್‌ನಿಂದ 221, ಗೂರ್ಖಾದಿಂದ 46 ಮತ್ತು ನುವಕೋಟ್‌ನಿಂದ 37 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಭಾರತ ಸೇರಿದಂತೆ ವಿದೇಶಗಳ ಸಹಾಯ ನಿರಾಕರಿಸಿದ ನೇಪಾಳ – ಸಾಧ್ಯವಾದ್ರೆ ಹಣಕಾಸಿನ ನೆರವಿಗೆ ಮನವಿ
ಅದೇ ರೀತಿ, ಧಾಡಿಂಗ್‌ನಿಂದ 33, ತನುವಿನಿಂದ 28, ನವಲ್ಪರಾಸಿ ಪಶ್ಚಿಮದಿಂದ 27 ಮತ್ತು ರಸುವಾದಿಂದ 12 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ದುರಂತ ಘಟನೆಯ ಮೂರನೇ ದಿನವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, 2,391 ನೇಪಾಳ ಸೇನಾ ಸಿಬ್ಬಂದಿ ಸೇರಿದಂತೆ 7,451 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈವರೆಗೂ 1100 ಜನರನ್ನು ರಕ್ಷಣೆ ಮಾಡಿದ್ದು, 1500 ಕ್ಕೂ ಹೆಚ್ಚು ಜನರು ಇನ್ನು ನಾಪತ್ತೆಯಾಗಿದ್ದಾರೆ. ಅವರ ಹುಡುಕಾಟ ನಡೆಯುತ್ತಲೇ ಇದೆ.
ಶವಗಾರದ ಹೊರಗೆ ಮೃತದೇಹಗಳ ಫೋಟೊ, ಕ್ಯೂಆರ್ ಕೋಡ್ ಮೂಲಕ ಹುಡಕಲು ಅನುಕೂಲ
ಘಟನಾ ಸ್ಥಳದಿಂದ ಹೊರ ತೆಗೆದಿರುವ ಮೃತದೇಹಗಳನ್ನು ಶವಗಾರದ ಮುಂದೆ ಅಂಟಿಸಲಾಗುತ್ತಿದೆ. ಕಠ್ಮಂಡುವಿನ ಮಹಾರಾಜಗುಂಜ್‌ನ ಬೋಧನಾ ಆಸ್ಪತ್ರೆಯ ಶವಾಗಾರದ ಹೊರಗೆ, ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತಮ್ಮ ಪ್ರೀತಿಪಾತ್ರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ನೇಪಾಳ ಪೊಲೀಸರು ರಸುವಾದ ಭೋಟೆಕೋಶಿ ನದಿಯಲ್ಲಿನ ಪ್ರವಾಹದಲ್ಲಿ ಸಾವನ್ನಪ್ಪಿದ ಜನರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಪತ್ತೆಯಾಗಿರುವ ಆದರೆ ಇನ್ನೂ ಗುರುತಿಸಲಾಗದ ಶವಗಳು ಸೇರಿವೆ. ಆನ್ಲೈನ್ ಮೂಲಕ ಮೃತದೇಹಗಳ ಪತ್ತೆಗೆ ಕ್ಯೂಆರ್ ಕೋಡ್ ಸಹಾಯ ಪಡೆಯಲಾಗುತ್ತಿದೆ.
ಮೃತದೇಹಗಳ ಹೆಚ್ಚಳ; ಶವಗಾರದ ಕೊರತೆ
ಈ ನಡುವೆ ಇನ್ನೊಂದು ಸಮಸ್ಯೆ ಎಂದರೆ ಮೃತದೇಹಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅವುಗಳನ್ನು ಸಂಗ್ರಹಿಸಿಡಲು ಸ್ಥಳವಿಲ್ಲದೇ ಸ್ಥಳೀಯ ಆಡಳಿತ ಪರದಾಡುತ್ತಿದೆ. ಕಾಸ್ಕಿಯಲ್ಲಿ, ಪೊಲೀಸರು ಶವಗಳ ಛಾಯಾಚಿತ್ರ ತೆಗೆಯುವುದು, ಬೆರಳಚ್ಚುಗಳನ್ನು ದಾಖಲಿಸುವುದು, ಮರಣೋತ್ತರ ಪರೀಕ್ಷೆ ನಡೆಸುವುದು ಮತ್ತು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುವುದನ್ನು ಒಳಗೊಂಡಿರುವ ಪ್ರಕ್ರಿಯೆಯನ್ನು ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಬಿನ್ ಕರ್ಕಿ ತಿಳಿಸಿದ್ದಾರೆ. ಸಾಧ್ಯವಾದಲೆಲ್ಲ ಪತ್ತೆಯಾಗಿರುವ ಶವವು ಕಾಣೆಯಾದ ಕುಟುಂಬ ಸದಸ್ಯರಿಗೆ ಸೇರಿದೆಯೇ ಎಂದು ಸಂಬಂಧಿಕರಿಗೆ ಸ್ಥಾಪಿಸಲು ಸಹಾಯ ಮಾಡಲು ಛಾಯಾಚಿತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುತ್ತದೆ. ಅಗತ್ಯವಿದ್ದಾಗ ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗಾಗಿ ಕಠ್ಮಂಡುವಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಅಪ್ಪನ 60ನೇ ಬರ್ತ್‌ಡೇ ಆಚರಣೆಗೆ ನೇಪಾಳಕ್ಕೆ ಹೋಗಿದ್ದರು: ನಾಪತ್ತೆಯಾದ ತಂದೆ-ತಾಯಿ ನೆನೆದು ಪುತ್ರಿ ಕಣ್ಣೀರು
ಎರಡನೇ ಅಲೆಯ ಆತಂಕದ ನಡುವೆ ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು, ರಕ್ಷಣಾ ತಂಡಗಳಿಗೂ ಈಗ ಹೊಸ ಪ್ರವಾಹದ ಭೀತಿ ಹೆಚ್ಚಾಗುತ್ತಿದೆ.

