ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಔಷಧಿಗಳನ್ನು(Fake Medicine) ಪೂರೈಕೆ ಮಾಡಿಕೊಂಡಿದ್ದ ನಾಲ್ಕು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಫಾರ್ಮಸಿ ಲೈಸೆನ್ಸ್ ಅನ್ನು ವಿಶೇಷ ತನಿಖಾ ತಂಡ(SIT) ಶಿಫಾರಸಿನ ಮೇರೆಗೆ ಔಷಧ ನಿಯಂತ್ರಣ ಇಲಾಖೆ (Drug Control Department) ರದ್ದುಗೊಳಿಸಿದೆ. ಅಲ್ಲದೆ, ನಕಲಿ ಔಷಧಿ ಪೂರೈಕೆಯಾಗಿರುವ ನಗರದ 25ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿಗೆ ಹಂತ-ಹಂತವಾಗಿ ನೋಟಿಸ್ ಜಾರಿಗೊಳಿಸಲು ಎಸ್ಐಟಿ ಮುಂದಾಗಿದೆ.
ತನಿಖಾ ತಂಡಕ್ಕೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಗಳೂರಿನ(Bengaluru) ಅಂದಾಜು 70 ರಿಂದ 80 ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳು ಹಾಗೂ ಮೆಡಿಕಲ್ ಸ್ಟೋರ್ಗಳಿಗೆ ಈ ನಕಲಿ ಔಷಧಿಗಳು ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಲೈಸೆನ್ಸ್ ರದ್ದಾಗಿರುವ ನಾಲ್ಕು ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧಿ ಮಾರಾಟ ಮಾಡದಂತೆ ಎಸ್ಐಟಿ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿ, ಅವುಗಳನ್ನು ಮುಚ್ಚಿಸಿದ್ದಾರೆ.

ನಕಲಿ ಔಷಧಿ ಪೂರೈಕೆಗೊಂಡಿರುವ ಎಲ್ಲಾ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ಫಾರ್ಮಸಿ ಮುಖ್ಯಸ್ಥರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಡಿವೈಡರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು – ನರರೋಗ ತಜ್ಞ ಸಜೀವ ದಹನ
ಬನಶಂಕರಿ 2ನೇ ಹಂತದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯ ಫಾರ್ಮಸಿಯು ಕೃಪಾ ಹೆಲ್ತ್ ಕೇರ್ನಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಔಷಧಿಗಳನ್ನು ಪಡೆದುಕೊಂಡಿರುವುದು ದೃಢಪಟ್ಟಿದೆ. ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ (Drugs and Cosmetics Act) ನಿಯಮಗಳ ಉಲ್ಲಂಘನೆಯಡಿ ಈ ಫಾರ್ಮಸಿಯ ಪರವಾನಗಿಯನ್ನು ಡ್ರಗ್ ಕಂಟ್ರೋಲ್ ಇಲಾಖೆ ರದ್ದುಪಡಿಸಿದೆ.
ತನಿಖೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ನಕಲಿ ಝವಿಸೆಫ್ಟಾ (Zavicefta) ಪೂರೈಕೆ ಮಾಡಲಾಗಿದೆ. ಝವಿಸೆಫ್ಟಾ ಗಂಭೀರ ಸೋಂಕುಗಳಿಗೆ ಬಳಸಲಾಗುವ ಪ್ರಮುಖ ಆ್ಯಂಟಿಬಯೋಟಿಕ್ (Antibiotic) ಔಷಧಿ ಎಂಬುದು ಪತ್ತೆಯಾಗಿದೆ.
2025 ರಿಂದ ಇಲ್ಲಿಯವರೆಗೆ, ಸತತ 8 ತಿಂಗಳುಗಳಿಂದ ಈ ನಕಲಿ ಆ್ಯಂಟಿಬಯೋಟಿಕ್ ಅನ್ನು ಸದರಿ ಫಾರ್ಮಸಿಗಳಲ್ಲಿ ನಿರಂತರವಾಗಿ ಮಾರಾಟ ಮಾಡಲಾಗಿದೆ.
ಈ ಅವಧಿಯಲ್ಲಿ ಐಸಿಯು ಮತ್ತು ಗಂಭೀರ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದ ನೂರಾರು ರೋಗಿಗಳಿಗೆ ಇದೇ ನಕಲಿ ಔಷಧಿ ನೀಡಲಾಗಿದೆಯೇ ಎಂಬ ಭೀತಿ ಶುರುವಾಗಿದೆ. ಈ ಫಾರ್ಮಸಿಯಿಂದ ಇನ್ನಾವ ಆಸ್ಪತ್ರೆಗಳಿಗೆ, ಕ್ಲಿನಿಕ್ಗಳಿಗೆ ಹಾಗೂ ರೋಗಿಗಳಿಗೆ ಔಷಧ ವಿತರಣೆಯಾಗಿದೆ ಎಂಬ ಬಗ್ಗೆ ಎಸ್ಐಟಿ ತನಿಖೆ ತೀವ್ರಗೊಳಿಸಿದೆ.

