ಕಠ್ಮಂಡು: ನೇಪಾಳದಲ್ಲಿ (Nepal) ಸಂಭವಿಸಿದ ಭೀಕರ ಪ್ರವಾಹದಿಂದ ಸುಮಾರು 552 ಜನ ಸಾವನ್ನಪ್ಪಿದ್ದಾರೆ. ಈ ಭೀಕರ ಪ್ರವಾಹ (Flood) ಪರಿಸ್ಥಿತಿಯನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ. ವಿದೇಶಗಳ ಸಹಾಯದ (Foreign Help) ಅಗತ್ಯ ಇಲ್ಲ ಎಂದು ನೇಪಾಳ ಸರ್ಕಾರ ತಿಳಿಸಿದೆ.
ಭಾರತದ (India) ಎನ್‌ಡಿಆರ್‌ಎಫ್, ಚೀನಾ, ಅಮೆರಿಕ ಸಹಾಯ ಹಸ್ತವನ್ನು ನೇಪಾಳ ನಿರಾಕರಿಸಿದೆ. ಇದರ ನಡುವೆ ಯುಕೆ, ಜಪಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಬಾಂಗ್ಲಾದೇಶದಿಂದಲೂ ಸಹಾಯದ ಭರವಸೆ ಕೇಳಿಬಂದಿದೆ. ಆದರೆ ಸದ್ಯಕ್ಕೆ ಸಹಾಯ ಬೇಡ, ಸಾಧ್ಯವಾದರೆ ಹಣಕಾಸಿನ ನೆರವು ನೀಡಿ ಎಂದಿರೋ ನೇಪಾಳ ಸರ್ಕಾರ ಮನವಿ ಮಾಡಿದೆ. 2015ರ ಭೂಕಂಪದ ವೇಳೆ ವಿದೇಶಿ ರಕ್ಷಣಾ ಕಾರ್ಯಾಚರಣೆ ತಂಡ ಆಗಮಿಸಿದ್ದಾಗ ಸಮನ್ವಯತೆ ಸಾಧಿಸುವುದೇ ನೇಪಾಳ ಸರ್ಕಾರಕ್ಕೆ ಸವಾಲಾಗಿತ್ತು. ಇದನ್ನೂ ಓದಿ: ಟಿಬೆಟ್ ಗಡಿಯಲ್ಲಿ ಒಡೆದ ಸರೋವರ, ಮತ್ತೆ ಪ್ರವಾಹ ಭೀತಿ: ನೇಪಾಳದಲ್ಲಿ ಹೈ ಅಲರ್ಟ್, ರಕ್ಷಣಾ ಕಾರ್ಯಾಚರಣೆ ಸ್ಥಗಿತ
ಇದರ ನಡುವೆ, ನೇಪಾಳದ ವಿನಂತಿಯ ಮೇರೆಗೆ ಭಾರತ ಸರ್ಕಾರ ವೈದ್ಯಕೀಯ ನೆರವು, ಎಂಜಿನಿಯರಿಂಗ್ ತಂಡಗಳನ್ನು ಕಳುಹಿಸಲು ಮತ್ತು ಹಾನಿಗೊಳಗಾದ ಮೂಲಸೌಕರ್ಯವನ್ನು ಪುನಃಸ್ಥಾಪನೆಗೆ ಸಹಾಯ ಮಾಡಲು ಮುಂದಾಗಿದೆ. ಹೆಚ್ಚುವರಿ ಮಾನವೀಯ ಸಹಾಯಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಈಗಾಗಲೇ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತದ ಎರಡು ವಿಮಾನಗಳು ನೇಪಾಳಕ್ಕೆ ತಲುಪಿವೆ. ಇನ್ನೊಂದು ವಿಮಾನ ಶೀಘ್ರದಲ್ಲೇ ನೇಪಾಳಕ್ಕೆ ತಲುಪಲಿದೆ. ಇದರೊಂದಿಗೆ ಸುರಂಗ ರಕ್ಷಣಾ ತಂಡವನ್ನು ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಮೊದಲು ಒಂದು ಪರಿಶೀಲನಾ ತಂಡವನ್ನು ಕಳುಹಿಸಲಾಗುತ್ತಿದೆ. ವೈದ್ಯಕೀಯ ತಂಡವನ್ನು ಸಹ ಕಳುಹಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು NDRF ತಂಡಗಳನ್ನು ಕಳುಹಿಸಲು ನಾವು ನೇಪಾಳದ ಅಧಿಕಾರಿಗಳಿಗೆ ಪ್ರಸ್ತಾಪವನ್ನು ನೀಡಿದ್ದೇವೆ. ಈ ನಿಟ್ಟಿನಲ್ಲಿ ನೇಪಾಳ ಸರ್ಕಾರದಿಂದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ನೇಪಾಳ ಅಧಿಕಾರಿಗಳಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನೇಪಾಳದ ವಿದೇಶಾಂಗ ಸಚಿವಾಲಯದ ವಕ್ತಾರ ಲೋಕ್ ಬಹದ್ದೂರ್ ಛೆಟ್ರಿ, ನಮಗೆ ಸಹಾಯದ ಅಗತ್ಯವಿಲ್ಲ ಎಂದಲ್ಲ. ಆದರೆ ನಮ್ಮ ಭದ್ರತಾ ವ್ಯವಸ್ಥೆ ಈಗ ಸಮರ್ಥವಾಗಿದೆ. ನೇಪಾಳಕ್ಕೆ ಯಾವುದೇ ವಿಶೇಷ ಸಹಾಯ ಅಥವಾ ಪರಿಣತಿಯ ಅಗತ್ಯವಿದ್ದರೆ ನಾವು ಕೇಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ದುರಂತದ ಪ್ರಭಾವ – ನೇಪಾಳ ಜಲಪ್ರಳಯದಲ್ಲಿ ಬಲಿಯಾದವರ ಸಂಖ್ಯೆ 469ಕ್ಕೆ ಏರಿಕೆ
