ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಹಾಗೂ ಭೂಕುಸಿತದಲ್ಲಿ ಬಲಿಯಾದವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಈವರೆಗೂ 469 ಜನರು ಸಾವನ್ನಪ್ಪಿದ್ದು, 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ನೇಪಾಳ (Nepal) ಪೊಲೀಸರ ಮಾಹಿತಿ ಪ್ರಕಾರ, ಪ್ರವಾಹದಲ್ಲಿ ಕೊಚ್ಚಿ ಹೋದ 1,500ಕ್ಕೂ ಅಧಿಕ ಜನರು ಇನ್ನೂ ಪತ್ತೆಯಾಗಿಲ್ಲ. ನಾಪತ್ತೆಯಾದವರಲ್ಲಿ 30ಕ್ಕೂ ಹೆಚ್ಚು ದೇಶಗಳ ವಿದೇಶಿ ಪ್ರಜೆಗಳಿದ್ದು, ಅದರಲ್ಲಿ 288 ಮಂದಿ ಭಾರತೀಯರಾಗಿದ್ದಾರೆ. ಅಲ್ಲದೇ ಈ ಪೈಕಿ ಪವರ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ ಭಾರತೀಯರು ಕಣ್ಮರೆಯಾಗಿದ್ದಾರೆ. ಈ ಹಿನ್ನೆಲೆ ನವದೆಹಲಿ ಮತ್ತು ಕಠ್ಮಂಡು ಪರಸ್ಪರ ಸಮನ್ವಯದೊಂದಿಗೆ ನಾಪತ್ತೆಯಾದವರ ಪತ್ತೆ ಕಾರ್ಯ ಹಾಗೂ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ನಿರತವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನೇಪಾಳ ಭೀಕರ ಪ್ರವಾಹ | 400ರ ಗಡಿಯತ್ತ ಸಾವಿನ ಸಂಖ್ಯೆ – 1500ಕ್ಕೂ ಹೆಚ್ಚು ಜನ ನಾಪತ್ತೆ

ನೇಪಾಳದಲ್ಲಿ ಪ್ರವಾಹದಿಂದಾಗಿ 469 ಮಂದಿ ಸಾವನ್ನಪ್ಪಿದ್ದರೆ, ಟಿಬೆಟ್‌ನಲ್ಲಿ ಮೂವರು ಸಾವನ್ನಪ್ಪಿರುವುದಾಗಿ ಚೀನಾದ ಅಧಿಕೃತ ಮಾಧ್ಯಮಗಳು ದೃಢಪಡಿಸಿವೆ. ಜೊತೆಗೆ, ವಿಪತ್ತು ಪೀಡಿತ ಪ್ರದೇಶದಿಂದ 499 ಸ್ಥಳೀಯ ನಿವಾಸಿಗಳು ಹಾಗೂ 555 ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
