ಕಠ್ಮಂಡು: ಟಿಬೆಟ್ ಗಡಿಯಲ್ಲಿ(Tibet Border) ಸರೋವರ ಒಡೆದು ಮತ್ತೆ ನೇಪಾಳದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು ರಕ್ಷಣಾ ಕಾರ್ಯಾಚರಣೆ(Rescue Operations) ಸ್ಥಗಿತಗೊಳಿಸಲಾಗಿದೆ
ಜಲ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 469ಕ್ಕೆ ಏರಿಕೆಆಗಿರುವ ಬೆನ್ನಲ್ಲೆ ಟಿಬೆಟ್ ಗಡಿ ಭಾಗದಲ್ಲಿ ಮತ್ತೊಂದು ಸರೋವರ ಒಡೆದಿದೆ ಎಂದು ನೇಪಾಳ ಸರ್ಕಾರ (Nepal Government) ಎಚ್ಚರಿಕೆ ನೀಡಿದೆ. ಇದರಿಂದಾಗಿ ಮತ್ತೆ ಜಲಪ್ರಳಯ ಸಂಭವಿಸುವ ಅಪಾಯ ಎದುರಾಗಿದ್ದು, ರಕ್ಷಣಾ ಸಿಬ್ಬಂದಿ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
“ಟಿಬೆಟ್ ಗಡಿ ಭಾಗದಲ್ಲಿ ಸರೋವರ ಒಡೆದಿರುವ ಮಾಹಿತಿ ಲಭ್ಯವಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಎಲ್ಲಾ ಭದ್ರತಾ ಸಿಬ್ಬಂದಿ, ರಕ್ಷಣಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ತೀವ್ರ ಎಚ್ಚರಿಕೆಯಿಂದಿರಬೇಕು ಹಾಗೂ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು” ಎಂದು ನೇಪಾಳ ಪೊಲೀಸರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವಾಹದಲ್ಲಿ ಕೊಚ್ಚಿಹೋದ ಮಹಿಳೆಯ ಮೃತದೇಹದಿಂದ ಚಿನ್ನದ ಕಿವಿಯೋಲೆ ಕಳವು – ಇಬ್ಬರು ಅರೆಸ್ಟ್
ಮತ್ತೊಂದೆಡೆ, ಟಿಬೆಟ್‌ನಲ್ಲಿ ಭೀಕರ ಪ್ರವಾಹದ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರವೂ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಚೀನಾ-ನೇಪಾಳ ಗಡಿಯಲ್ಲಿ ಸಂಭವಿಸಿದ ಬೃಹತ್ ಭೂಕುಸಿತದ ನಂತರ ಭಗ್ನಾವಶೇಷಗಳಿಂದ ಸರೋವರವೊಂದು ಸೃಷ್ಟಿಯಾಗಿತ್ತು. ಇದೀಗ ಈ ಸರೋವರದ ನೀರು ರಕ್ಷಣಾ ತಂಡಗಳು ತೆರಳುತ್ತಿದ್ದ ಪ್ರದೇಶದ ಕಡೆಗೆ ಅಪಾಯಕಾರಿ ಮಟ್ಟದಲ್ಲಿ ಉಕ್ಕಿ ಹರಿಯಲು ಪ್ರಾರಂಭಿಸಿದೆ ಎಂದು ಚೀನಾದ ಸಿಸಿಟಿವಿ (CCTV) ವಾಹಿನಿ ತಿಳಿಸಿದೆ. ಇದನ್ನೂ ಓದಿ: Nepal Flash Flood| ಮಾಹಿತಿ ಹಂಚಿಕೆ ವೈಫಲ್ಯದಿಂದ ದುರಂತ – ಚೀನಾದ ನಡೆಗೆ ಆಕ್ರೋಶ
ಬುಧವಾರ ಟಿಬೆಟ್‌ನ ಗಡಿ ಪಟ್ಟಣವಾದ ಗೈರಾಂಗ್‌ನಲ್ಲಿ ಭಾರಿ ಮಣ್ಣಿನ ರಾಶಿ ಕುಸಿದು ಸೃಷ್ಟಿಯಾಗಿದ್ದ ಈ ನೈಸರ್ಗಿಕ ಸರೋವರವು ಇದೀಗ ಉಕ್ಕಿ ಹರಿಯುತ್ತಿರುವುದು ಗಡಿ ಭಾಗದಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
