ನೇಪಾಳ: ಭೀಕರ ಪ್ರವಾಹದ ನಡುವೆ ಮಾನವೀಯತೆಯನ್ನೇ ಪ್ರಶ್ನಿಸುವಂತಹ ಘಟನೆ ನೇಪಾಳದಲ್ಲಿ ನಡೆದಿದೆ. ಪ್ರವಾಹದಲ್ಲಿ (Nepal Flood) ಕೊಚ್ಚಿಹೋಗಿ ಮೃತಪಟ್ಟಿದ್ದ ಮಹಿಳೆಯ ಮೃತದೇಹದಿಂದ ಚಿನ್ನದ ಕಿವಿಯೋಲೆಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ನೇಪಾಳ ಪೊಲೀಸರು (Nepal Police) ಬಂಧಿಸಿದ್ದಾರೆ.
ನೇಪಾಳದ ನಾರಾಯಣಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದ ಮಹಿಳೆಯ ಮೃತದೇಹವನ್ನ ದಡಕ್ಕೆ ಎಳೆದು ತರುತ್ತಿದ್ದ ವೇಳೆ ಆರೋಪಿಗಳು ಆಕೆಯ ಕಿವಿಯೋಲೆಗಳನ್ನ (Earrings) ತೆಗೆದುಕೊಂಡಿದ್ದಾರೆ. ಈ ದೃಶ್ಯಗಳ 41 ಸೆಕೆಂಡ್‌ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
मृतकको कानको मुन्द्रा चोरी गर्ने व्यक्तिहरु नियन्त्रणमा लिएको सम्बन्धमा । pic.twitter.com/pnPlnQPn9j
— Nepal Police (@NepalPoliceHQ) August 27, 2026
ವೈರಲ್ ವಿಡಿಯೋದಲ್ಲಿ ಏನಿತ್ತು?
ವಿಡಿಯೋದಲ್ಲಿ ಇಬ್ಬರು ಯುವಕರು ಮರದ ಹಲಗೆಗಳ ಸಹಾಯದಿಂದ ನೀರಿನಲ್ಲಿ ತೇಲಿ ಬಂದಿದ್ದ ಮಹಿಳೆಯ ಮೃತದೇಹವನ್ನ ದಡದತ್ತ ಎಳೆದು ತಂದಿದ್ದಾರೆ. ಮಹಿಳೆಯ ಮೃತದೇಹದ ಮುಂದಲೆ (ತಲೆಕೂದಲು) ಹಿಡಿದು ಎಳೆದಾಡಿದ್ದಾರೆ. ಬಳಿಕ ಎರಡೂ ಕಿವಿಗಳಲ್ಲಿದ್ದ ಓಲೆಗಳನ್ನ ತೆಗೆದು ಒಂದು ಬದಿಗೆ ಇಡುತ್ತಿದ್ದಾರೆ. ಈ ಘಟನೆಯನ್ನು ಸಮೀದಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ವೈರಲ್ ಆದ ನಂತರ ನೇಪಾಳ ಪೊಲೀಸರು ಮತ್ತೆ ಮರುಹಂಚಿಕೊಂಡು, ಘಟನೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನ ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಆರೋಪಿಗಳು ಯಾರು?
ಚಿಟ್ವಾನ್ ಪೊಲೀಸರು ನಡೆಸಿದ ತನಿಖೆಯಲ್ಲಿ, ಪ್ರವಾಹದ ವೇಳೆ ಮಹಿಳೆ ನಾರಾಯಣಿ ನದಿಗೆ ಕೊಚ್ಚಿಹೋಗಿದ್ದ ಸಂಗತಿ ಪತ್ತೆಯಾಗಿದೆ. ವೈರಲ್ ವಿಡಿಯೋ ಆಧರಿಸಿ ಆರೋಪಿಗಳನ್ನ 25 ವರ್ಷದ ಮದನ್ ಗುರುಂಗ್ ಮತ್ತು 38 ವರ್ಷದ ಉಮೇಶ್ ಚೌಧರಿ ಎಂದು ಗುರುತಿಸಲಾಗಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಗುರುವಾರ ಭಾರತ್ಪುರ ಮಹಾನಗರ-1ರ ಪೊಖರಾ ಬಸ್ ಪಾರ್ಕ್ ಸಮೀಪ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಪ್ರವಾಹ ಹಾಗೂ ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ತರ ಮೇಲೆ ದರೋಡೆ ಅಥವಾ ಯಾವುದೇ ರೀತಿಯ ಅಮಾನವೀಯ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಇನ್ನೂ ನೇಪಾಳದಲ್ಲಿ ಉಂಟಾದ ಮಹಾ ಪ್ರವಾಹಕ್ಕೆ ಕನಿಷ್ಠ 469 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಮುಂದುವರಿದಿವೆ.
