ಕಠ್ಮಂಡು: ಟಿಬೆಟ್-ನೇಪಾಳ ಗಡಿಭಾಗದಲ್ಲಿ (Tibet-Nepal Border) ಸಂಭವಿಸಿದ ವಿನಾಶಕಾರಿ ಜಲಸ್ಫೋಟ ಹಾಗೂ ಭೀಕರ ಪ್ರವಾಹದ ಬೆನ್ನಲ್ಲೇ ಮುನ್ಸೂಚನೆ ಹಾಗೂ ಮಾಹಿತಿ ಹಂಚಿಕೆಯ ಕೊರತೆಯೇ (Data Sharing Failure) ಈ ಬಾರಿಯ ಅನಾಹುತಕ್ಕೆ ಪ್ರಮುಖ ಕಾರಣ ಎಂಬ ಗಂಭೀರ ಚರ್ಚೆಗಳು ಜಾಗತಿಕ ಮಟ್ಟದಲ್ಲಿ ಆರಂಭವಾಗಿದೆ.
ಕಳೆದ ವರ್ಷ ಇದೇ ಸೂಕ್ಷ್ಮ ಗಡಿ ಭಾಗದಲ್ಲಿ ಹಿಮನದಿ ಸರೋವರ ಒಡೆದು ದುರಂತ ಸಂಭವಿಸಿದಾಗ, ಭವಿಷ್ಯದಲ್ಲಿ ಎದುರಾಗಬಹುದಾದ ಇಂತಹ ನೈಸರ್ಗಿಕ ವಿಕೋಪಗಳನ್ನು ನಿಯಂತ್ರಿಸಲು ಚೀನಾ ಮತ್ತು ನೇಪಾಳ ನಡುವೆ ಗಡಿಯುದ್ದಕ್ಕೂ ನೈಜ-ಸಮಯದ ಮಾಹಿತಿ ಹಂಚಿಕೊಳ್ಳುವ (Cross-border Real-time Data Sharing) ಮಹತ್ವದ ದ್ವಿಪಕ್ಷೀಯ ಒಪ್ಪಂದ ನಡೆದಿತ್ತು. ಆದರೆ ಈ ಬಾರಿಯ ಭೀಕರ ಪ್ರವಾಹದ ವೇಳೆ ಮೇಲ್ಭಾಗದ ಟಿಬೆಟ್ ಭಾಗದಲ್ಲಿ ನದಿ ನೀರಿನ ಮಟ್ಟ ದಿಢೀರ್ ಹೆಚ್ಚಳವಾದ ಬಗ್ಗೆ ಅಥವಾ ಸಂಭವನೀಯ ಅಪಾಯದ ಕುರಿತು ಚೀನಾದ ಕಡೆಯಿಂದ ನೇಪಾಳಕ್ಕೆ ಸಕಾಲದಲ್ಲಿ ಯಾವುದೇ ಮುನ್ಸೂಚನೆ ಅಥವಾ ಎಚ್ಚರಿಕೆಯ ಸಂದೇಶಗಳು ರವಾನೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.
ನೇಪಾಳದ ರಾಷ್ಟ್ರೀಯ ವಿಪತ್ತು ಮತ್ತು ನಿರ್ವಹಣಾ ಪ್ರಾಧಿಕಾರದ ವರದಿಗಳ ಪ್ರಕಾರ, ಟಿಬೆಟ್‌ನ ಕೀರುಂಗ್ ಕಡೆಯಿಂದ ಭಾರಿ ಪ್ರಮಾಣದ ಪ್ರವಾಹ ನುಗ್ಗಿ ಬರುತ್ತಿರುವುದು ಚೀನಾಕ್ಕೆ ಮುಂಚಿತವಾಗಿ ತಿಳಿದಿತ್ತು. ಆದರೆ ಚೀನಾ ಅಧಿಕಾರಿಗಳು ನೇಪಾಳಕ್ಕೆ ಅಧಿಕೃತವಾಗಿ ಯಾವುದೇ ಮುನ್ಸೂಚನೆ ನೀಡಿರಲಿಲ್ಲ.
This is seriously scary. CCTV footage from Gyirong Port in Tibet, China, directly opposite Nepal’s Rasuwa district. This flash flood hit here first and later caused massive havoc in Nepal. Can’t even imagine someone surviving this. Prayers for everyone affected. 🙏 https://t.co/o805P8KGSu pic.twitter.com/31QzZ64aBD
— Nikhil saini (@iNikhilsaini) August 26, 2026
ಚೀನಾ(China) ಮಾಹಿತಿ ನೀಡದ ಕಾರಣ ಪ್ರವಾಹ ಗ್ರಾಮಗಳಿಗೆ ನುಗ್ಗಿದ 45 ನಿಮಿಷಗಳ ನಂತರ ನೇಪಾಳದ ಗಡಿ ಜಿಲ್ಲೆಯ ಜಿಲ್ಲಾಧಿಕಾರಿ (CDO) ಹಾಗೂ ಸ್ಥಳೀಯರು ಭೀಕರತೆಯನ್ನು ಕಣ್ಣಾರೆ ಕಂಡು ಕಠ್ಮಂಡುವಿನ ಪ್ರಧಾನ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ. ಅಷ್ಟರಲ್ಲಾಗಲೇ ಪ್ರವಾಹ ಅಪ್ಪಳಿಸಿ ಪರಿಸ್ಥಿತಿ ಕೈಮೀರಿತ್ತು. ಇದನ್ನೂ ಓದಿ: ಪ್ರವಾಹಕ್ಕೆ ಭಾರತದಿಂದ ನೆರವಿನ ಭರವಸೆ; ನೇಪಾಳ ಪ್ರಧಾನಿ ಜೊತೆ ಮೋದಿ ಮಾತುಕತೆ
ಚೀನಾ ಈ ಮಾಹಿತಿ ಹಂಚಿಕೊಳ್ಳದ ಕಾರಣ ನೇಪಾಳದ ತಗ್ಗು ಪ್ರದೇಶದಲ್ಲಿದ್ದ ಹಳ್ಳಿಗಳು ಮತ್ತು ಪ್ರವಾಸಿಗರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಮಯವೇ ಸಿಗಲಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ಪ್ರವಾಹದ ಭಾರೀ ಅಲೆಗಳು ದಿಢೀರನೆ ನುಗ್ಗಿ ಇಡೀ ಚೆಕ್‌ಪೋಸ್ಟ್ ಮತ್ತು ಕಟ್ಟಡಗಳನ್ನು ಕೊಚ್ಚಿಹಾಕುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.
ನೇಪಾಳದ ಪ್ರಮುಖ ಪತ್ರಕರ್ತರು ಚೀನಾದ ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ನೇಪಾಳವು ಯಾವಾಗಲೂ ತನ್ನ ನೆರೆಹೊರೆಯವರ ಭದ್ರತಾ ಹಿತಾಸಕ್ತಿಗಳನ್ನು ಗೌರವಿಸುತ್ತದೆ, ಆದರೆ ನಮ್ಮ ಉತ್ತರದ ನೆರೆಹೊರೆಯವರು (ಚೀನಾ) ಮುಂಚಿತವಾಗಿ ಎಚ್ಚರಿಕೆ ನೀಡದೆ ನಮಗೆ ಮೋಸ ಮಾಡಿದ್ದಾರೆ. ಇದು ನೇಪಾಳ-ಚೀನಾ ನಡುವಿನ ಕೇವಲ ‘ಏಕಮುಖ ಪ್ರೀತಿ’ (One-sided love)” ಎಂದು ಆಕ್ರೋಶ ಹೊರಹಾಕಿದ್ದಾರೆ
ಹಿಮನದಿ, ಸರೋವರಗಳು ಒಡೆಯುವ ಅಪಾಯಗಳ ಕುರಿತು ಕ್ರಾಸ್-ಬಾರ್ಡರ್ ಮಾಹಿತಿ ಹಂಚಿಕೊಳ್ಳುವಂತೆ ಒಪ್ಪಂದವಿದ್ದರೂ ಪ್ರತಿ ಬಾರಿಯೂ ಚೀನಾ ಇಂತಹ ಅತ್ಯಗತ್ಯ ಮಾಹಿತಿಯನ್ನು ಮುಚ್ಚಿಡುತ್ತಾ ಬರುತ್ತಿದೆ ಎಂದು ನೇಪಾಳದ ಹವಾಮಾನ ಇಲಾಖೆಯ ಉನ್ನತ ಅಧಿಕಾರಿಗಳು ಈ ಹಿಂದೆಯೂ ಆರೋಪಿಸಿದ್ದರು.
ಮಾಹಿತಿ ಹಂಚಿಕೆಯ ವೈಫಲ್ಯದಿಂದ ಇಷ್ಟೊಂದು ದೊಡ್ಡ ದುರಂತ ಸಂಭವಿಸಿದ ನಂತರ, ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಅಧಿಕಾರಿಗಳಿಗೆ ಇನ್ಮುಂದೆ ಗಡಿ ಭಾಗದಲ್ಲಿ ಕಟ್ಟುನಿಟ್ಟಾದ ಮುಂಚೂಣಿ ಎಚ್ಚರಿಕೆ ವ್ಯವಸ್ಥೆಗಳನ್ನು ಬಲಪಡಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

