ನವದೆಹಲಿ: ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ನೇಪಾಳದಲ್ಲಿ (Nepal flood) ಸಂಭವಿಸಿದ ಪ್ರವಾಹದಿಂದ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಸಂತಾಪ ಸೂಚಿಸಿದ್ದು, ಸಂಕಷ್ಟದ ಸಮಯದಲ್ಲಿ ನೇಪಾಳದ ಜೊತೆ ಭಾರತ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.
ಬುಧವಾರ (ಆ.26) ನೇಪಾಳ ಪ್ರಧಾನಿ ಬಾಲೆನ್ ಶಾ ಅವರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಅವರು ಮಾಹಿತಿ ಪಡೆದಿದ್ದಾರೆ. ನೇಪಾಳಕ್ಕೆ ಅಗತ್ಯವಿರುವ ಎಲ್ಲಾ ನೆರವು ಹಾಗೂ ಪರಿಹಾರ ಸಹಾಯ ನೀಡಲು ಭಾರತ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಎರಡು ಜಿಲ್ಲೆಗಳಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದು, ಸುಮಾರು 400 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನದಿಯ ದಡದಲ್ಲಿರುವ ಹಲವು ಪ್ರದೇಶಗಳು ಪ್ರವಾಹಕ್ಕೆ ತತ್ತರಿಸಿದ್ದು, ಹಲವಾರು ಜಲವಿದ್ಯುತ್ ಯೋಜನೆಗಳಿಗೂ ಹಾನಿಯಾಗಿದೆ.
ರಕ್ಷಣಾ ಕಾರ್ಯಕ್ಕೆ ಭಾರತದ ತಂಡಗಳು
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಲು ಭಾರತ ನೇಪಾಳದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಭಾರತೀಯ ವಾಯುಪಡೆಯ ವಿಮಾನಗಳ ಮೂಲಕ ಔಷಧಿ, ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ: ಟ್ರಕ್‌ಗೆ ಕಾರು ಡಿಕ್ಕಿ – 23 ವರ್ಷದ ಯೂಟ್ಯೂಬರ್, ತಾಯಿ ಸಾವು
ಅಲ್ಲದೆ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯನ್ನು ನೇಪಾಳಕ್ಕೆ ಕಳುಹಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ.
105 ಭಾರತೀಯರು ಸೇರಿದಂತೆ 291 ವಿದೇಶಿಯರು ನಾಪತ್ತೆ
ರಸುವಾ ಪ್ರದೇಶದ ಭೋಟೆ ಕೋಶಿ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದ ಬಳಿಕ 105 ಭಾರತೀಯರು ಸೇರಿದಂತೆ 291 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ಮಾಹಿತಿ ನೀಡಿದೆ.
ಒಟ್ಟು 384 ಪ್ರಯಾಣಿಕರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇವರಲ್ಲಿ 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ಪ್ರಜೆಗಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ನಾಪತ್ತೆಯಾಗಿರುವವರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಭಾರತೀಯರನ್ನು ಸುರಕ್ಷಿತವಾಗಿ ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ತುರ್ತು ಸಂಪರ್ಕ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಅತಿಕಾಯ ಚಿತ್ರದಲ್ಲಿ ರಾಕ್‌ಲೈನ್ ಖಾಕಿ ಖದರ್
