Bengaluru Rural
ಕೊರೊನಾ ಸಂಪೂರ್ಣ ನಿವಾರಣೆ, ಲೋಕ ಕಲ್ಯಾಣಕ್ಕಾಗಿ ಹೋಮ ಹವನ

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರದಲ್ಲಿರುವ ನೂರಾರು ವರ್ಷಗಳ ಇತಿಹಾಸ ಪ್ರಸಿದ್ಧವಾಗಿರುವ ಶ್ರೀದೇವಿ, ಭೂದೇವಿ ಸಮೇತ ಶ್ರೀ ರಂಗನಾಥಸ್ವಾಮಿ ದೇವಾಲಯದ 9ನೇ ವಾರ್ಷಿಕೋತ್ಸವ ಹಾಗೂ ತಿರು ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಂಡು, ಮಹಾಮಾರಿ ಕೊರೊನಾ ಸಂಪೂರ್ಣ ನಿವಾರಣೆಯಾಗಿ ಲೋಕ ಕಲ್ಯಾಣಕ್ಕಾಗಿ ಹೋಮ ಹವನ ನಡೆಸಲಾಯಿತು.
ದೇವರಿಗೆ ವಿಶೇಷ ಅಲಂಕಾರದೊಂದಿಗೆ ಹೋಮ ಹವನ ಅರ್ಚನೆ ಆರಾಧನೆಗಳೊಂದಿಗೆ ಪ್ರಾರಂಭವಾದ ತಿರು ಕಲ್ಯಾಣ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಮುಖ್ಯವಾಗಿ ಎಲ್ಲರ ಗಮನ ಸೆಳೆದಿದ್ದು ತಿರುಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಜತೆಗೆ ಉಯ್ಯಾಲೋತ್ಸವ ಮಹಾಮಂಗಳಾರತಿ ಹಾಗೂ ಶಯನೋತ್ಸವ ಕಾರ್ಯಕ್ರಮಗಳು ವಿಶೇಷವಾಗಿ ಭಕ್ತರ ಕಣ್ಮನ ಸೆಳೆದವು. ನಂತರ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಸೇವಾ ಸಮಿತಿಯ ಅಧ್ಯಕ್ಷ ಲಕ್ಷ್ಮಣಮೂರ್ತಿ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವೂ ದಾಸನಪುರದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ 9ನೇ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವ ಕಾರ್ಯಕ್ರಮ ಏರ್ಪಡಿಸಿದ್ದು, ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಸಲಾಗಿದ್ದು, ಸೇವಾ ಸಮಿತಿಯ ಆಡಳಿತ ಮಂಡಳಿಯ ಗೌರವ ಅಧ್ಯಕ್ಷ ರಾಮಕೃಷ್ಣಪ್ಪನವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರುಗಳು ಹಾಗೂ ವೈಕುಂಠ ಏಕಾದಶಿ ಸಮಿತಿಯ ಎಲ್ಲಾ ಸದಸ್ಯರುಗಳು ಹಾಗೂ ಇತರ ಗಣ್ಯರ ಸಹಕಾರದಿಂದ ಇಷ್ಟೊಂದು ವಿಜೃಂಭಣೆಯಿಂದ ಮಾಡಲಾಗಿದೆ. ಈ ಬಾರಿ ಧನ್ವಂತರಿ ಹೋಮವನ್ನು ಕೊರೊನಾ ನಿವಾರಣೆಗೆ ಮಾಡಿದ್ದು ವಿಶೇಷವಾಗಿದೆ ಎಂದು ತಿಳಿಸಿದರು.
