ಬೆಂಗಳೂರು: ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡ ಸಂಬಂಧ ಅವರ ಪತ್ನಿ ಮೇಘನಾ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಅದರ ಪ್ರತಿ ಲಭ್ಯವಾಗಿದೆ.
ಉದ್ಯಮಿ ವೈಶಾಕ್ ಪತ್ನಿ ಮೇಘನಾ ಅವರು ಆರ್‌ಆರ್ ನಗರ (RR Nagar Police) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನನ್ನ ಪತಿ ಹಾಗೂ ಕೃಷಿ ತಾಪಂಡ ನಡುವೆ ಸಂಬಂಧ ಇತ್ತು. ಆದರೆ ನನ್ನ ಪತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನನಗೆ ಗೊತ್ತಿಲ್ಲ. ಹೀಗಾಗಿ ಸಾವಿನ ಬಗ್ಗೆ ನನಗೆ ಯಾರ ಮೇಲೆಯೂ ಅನುಮಾನವಿಲ್ಲ. ಆದ್ದರಿಂದ ಸಾವಿಗೆ ಸ್ಪಷ್ಟ ಕಾರಣ ತಿಳಿಯಲು ತನಿಖೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಚಿತಾಗಾರದಲ್ಲಿ ಗೆಳೆಯ ವೈಶಾಕ್ ಅಂತ್ಯಕ್ರಿಯೆ – ಅಂತಿಮ ದರ್ಶನಕ್ಕೆ ಬಂದ ಕೃಷಿ
ದೂರಿನಲ್ಲಿ ಏನಿದೆ?
ನಾನು ಹಾಗೂ ವೈಶಾಕ್ 2010ರ ಅ.11ರಂದು ಮದುವೆಯಾಗಿದ್ದೆವು. ನನ್ನ ಪತಿ ವೀರಭದ್ರನಗರದಲ್ಲಿರುವ ಶ್ರೀ ಅಡಿಗ ಆಟೋಮೋಟೀವ್ಸ್‌ನ ಮಾಲೀಕರಾಗಿದ್ದರು. ನಾವು ಅನ್ಯೋನ್ಯವಾಗಿದ್ವಿ. ಈ ನಡುವೆ ನನ್ನ ಪತಿ ಹಾಗೂ ಕೃಷಿ ತಾಪಂಡ ಅನೈತಿಕ ಸಂಬಂಧ ಹೊಂದಿರುವುದಾಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗಿತ್ತು. ಅದಾದ ಬಳಿಕ ನಾನು, ನನ್ನ ಅತ್ತೆ, ಮಾವ ಹಾಗೂ ಸಂಬಂಧಿಕರು ಸೇರಿ ಬುದ್ಧಿವಾದ ಹೇಳಿದಾಗ ಆಕೆಯನ್ನು ಬಿಡುತ್ತೇನೆಂದು ಹೇಳಿದ್ದರು.
ಅದಾದ ನಂತರವೂ ಆಕೆಯನ್ನು ಬಿಡದೇ ಸಂಬಂಧ ಮುಂದುವರೆದಿತ್ತು. ಈ ಬಗ್ಗೆ ನಾನು ಮತ್ತು ನನ್ನ ಮಾವ ಅವರ ಬಳಿ ಕೇಳಿದ್ದೆವು. ಅಲ್ಲದೇ ಕಳೆದ ಒಂದು ತಿಂಗಳಿಂದ ಮನೆಗೆ ಬಂದಿರಲಿಲ್ಲ. ಮಾತಾಡುವುದನ್ನು ಕಡಿಮೆ ಮಾಡಿದ್ದರು. ಕರೆಯನ್ನೂ ಮಾಡುತ್ತಿರಲಿಲ್ಲ. ಏನೇ ಹೇಳಬೇಕಿದ್ದರೂ ಮೆಸೇಜ್ ಮೂಲಕವೇ ತಿಳಿಸಬೇಕಿತ್ತು. ಹೀಗಿರುವಾಗ ಜೂ.24ರಂದು ಸಂಜೆ 5:30ರ ಸುಮಾರಿಗೆ ಮೆಸೇಜ್ ಮಾಡಿ, ಮಗ ಶಾಲೆಯಿಂದ ಬಂದಿದ್ದಾನಾ ಎಂದು ಕೇಳಿದ್ದರು. ಅದಕ್ಕೆ ನಾನು ಬಂದಿದ್ದಾನೆ ಎಂದು ತಿಳಿಸಿದ್ದೆ.ಇದನ್ನೂ ಓದಿ: ಗೆಳೆಯನ ಆತ್ಮಹತ್ಯೆ ವಿಚಾರ ಪೊಲೀಸರಿಗೆ ತಿಳಿಸಿದ್ದೇ ಕೃಷಿ ತಾಪಂಡ
ಅದೇ ದಿನ ರಾತ್ರಿ ಸುಮಾರು 10:30ರ ಸುಮಾರಿಗೆ ನನ್ನ ಮಾವನವರಿಗೆ ಆರ್‌ಆರ್ ನಗರ ಪೊಲೀಸರು ಕರೆ ಮಾಡಿ, ವೈಶಾಕ್ ನಿಮ್ಮ ಮಗನಾ ಎಂದು ವಿಚಾರಿಸಿ, ನಿಮ್ಮ ಮಗ ಕೃಷಿ ತಾಪಂಡ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಹೋದಾಗ ನನ್ನ ಪತಿ ರೂಮಿನಲ್ಲಿ ಮಂಚದ ಮೇಲೆ ಅಂಗಾತವಾಗಿ ಮಲಗಿರುವ ಸ್ಥಿತಿಯಲ್ಲಿದ್ದರು. ನಾಲಿಗೆ ಸ್ವಲ್ಪ ಚಾಚಿದ್ದು, ಕಣ್ಣುಗಳು ಸ್ವಲ್ಪ ತೆರೆದಿದ್ದವು. ಕುತ್ತಿಗೆ ಭಾಗದಲ್ಲಿ ಮಾರ್ಕ್ ಇತ್ತು. ಕಟ್ ಆಗಿರುವ ಅರ್ಧ ಸೀರೆ ಫ್ಯಾನಿಗೆ ನೇತಾಡುತ್ತಿತ್ತು. ನಂತರ ನಡೆದ ವಿಚಾರವನ್ನ ಅಲ್ಲೇ ಇದ್ದ ಪೊಲೀಸರು ಹಾಗು ಕೃಷಿ ತಾಪಂಡರವರಿಂದ ತಿಳಿದುಕೊಂಡೆವು.
ಪೊಲೀಸರು ಮುಂದಿನ ಕಾರ್ಯಕ್ಕೆ ನನ್ನ ಗಂಡನ ಮೃತದೇಹವನ್ನ ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ನನ್ನ ಪತಿ ಯಾವ ಕಾರಣಕ್ಕೆ ನೇಣು ಹಾಕಿಕೊಂಡರು ಎಂಬುದು ನನಗೆ ಗೊತ್ತಿಲ್ಲ. ಸಾವಿನ ಬಗ್ಗೆ ನನಗೆ ಯಾರ ಮೇಲೂ ಅನುಮಾನವಿಲ್ಲ. ಹೀಗಾಗಿ ಸಾವಿನ ಸ್ಪಷ್ಟ ಕಾರಣ ತಿಳಿಯಲು ಕರ್ತವ್ಯ ನಿರತ ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸಿ, ಬಳಿಕ ಮೃತದೇಹವನ್ನು ನಮಗೆ ನೀಡಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ಆತ್ಮಹತ್ಯೆ
